ಮೆಲ್ಬೋರ್ನ್: ಒಂದಲ್ಲ, ಎರಡಲ್ಲ…ಪಾಕಿಸ್ತಾನ (IND-PAK) ವಿರುದ್ಧ ಐಸಿಸಿ ವಿಶ್ವ ಕಪ್ ಇತಿಹಾಸದಲ್ಲಿ ಭಾರತ ಸಾಧಿಸಿದ್ದು ಬರೋಬ್ಬರಿ ೧೨ ಗೆಲುವು. ಇನ್ನೂ ಗತ್ತಿನಿಂದ ಹೇಳಬೇಕೆಂದರೆ ಆಡಿದ ಹನ್ನೆರಡೂ ಪಂದ್ಯಗಳಲ್ಲಿ ಜಯಭೇರಿ! ೭ ಗೆಲುವು ಏಕದಿನ ವಿಶ್ವ ಕಪ್‌ನಲ್ಲಿ ಒಲಿದರೆ, ೫ ಜಯ ಟಿ೨೦ ವಿಶ್ವ ಕಪ್‌ನಲ್ಲಿ ಬಂದಿದೆ.
ಭಾರತ ಗೆಲುವಿನ ತೋರಣ ಕಟ್ಟಲಾರಂಭಿಸಿದ್ದು ೧೯೯೨ರ ಏಕ ದಿನ ವಿಶ್ವ ಕಪ್‌ನಲ್ಲಿ. ಅಂದು ಇಮ್ರಾನ್ ಖಾನ್ ನೇತೃತ್ವದ ಪಾಕ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತಾದರೂ ಲೀಗ್ ಹಂತದಲ್ಲಿ ಪಾಕ್ ತಂಡ ಭಾರತಕ್ಕೆ ಶರಣಾಯಿತು. ಅಲ್ಲಿಂದ ಮೊದಲ್ಗೊಂಡು ೨೦೧೯ರ ವಿಶ್ವ ಕಪ್ ತನಕ ಪಾಕ್ ಪಡೆ ಭಾರತದೆದುರು ಹಿನ್ನಡೆ ಅನುಭವಿಸುತ್ತಲೇ ಇತ್ತು. ಆದರೆ ಕಳೆದ ಟಿ೨೦ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ಮೊದಲ ಬಾರಿ ಗೆದ್ದು ಗೆಲುವಿನ ಖಾತೆ ತೆರೆಯಿತು. ಇದು ವಿಶ್ವ ಕಪ್ ಇತಿಹಾಸದಲ್ಲಿ ಪಾಕ್‌ಗೆ ಒಲಿದ ಮೊದಲ ಗೆಲುವು. ಮತ್ತು ಭಾರತಕ್ಕೆ ಎದುರಾದ ಮೊದಲ ಸೋಲು.
ಗೆದ್ದರೆ ಕಪ್ ಎತ್ತಿದಷ್ಟೇ ಖುಷಿ
ಐಸಿಸಿ ಕೂಟದಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕಿಂತ ಮಿಗಿಲಾದ ಪಂದ್ಯ ಖಂಡಿತ ಇಲ್ಲ. ಇದು ಸೃಷ್ಟಿಸುವ ರೋಚಕತೆಗೆ ಮಿತಿಯೇ ಇಲ್ಲ. ಇತ್ತಂಡಗಳು ಜಿದ್ದಿಗೆ ಬಿದ್ದು ಆಡುವ ಪಂದ್ಯವಿದು. ಇಲ್ಲಿ ಭಾರತ ಕಪ್ ಗೆಲ್ಲಬೇಕೆಂದಿಲ್ಲ, ಪಾಕಿಸ್ತಾನವನ್ನು ಸೋಲಿಸಿದರೆ ಸಾಕು. ಕಪ್ ಎತ್ತಿದಷ್ಟೇ ಖುಷಿ. ಗಡಿಯಾಚೆಯೂ ಅಷ್ಟೇ. ಈ ಸಲದ ವಿಶ್ವ ಕಪ್ ವಿಷೇಶವೆಂದರೆ ಭಾರತ-ಪಾಕಿಸ್ತಾನ ಲೀಗ್ ಹಂತದ ಮೊದಲ ಪಂದ್ಯದಲ್ಲೇ ಎದುರಾಗಿರುವುದು. ಕೂಟದ ಎರಡನೇ ದಿನವೇ ವೋಲ್ಟೆಜ್ ವೀಟರ್ ಗರಿಷ್ಠ ಮಟ್ಟಕೇರಲಿದೆ.
ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು ಸಶಕ್ತ. ಆದರೆ ಯುಎಇಯಲ್ಲಿ ನಡೆದ ಕಳೆದ ವರ್ಷದ ಕೂಟದಲ್ಲಿ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಇತ್ತೀಚೆಗೆ ಮುಕ್ತಾಯ ಕಂಡ ಏಷ್ಯಾಕಪ್‌ನಲ್ಲಿಯೂ ಭಾರತ ತಂಡ ಪಾಕ್ ವಿರುದ್ಧ ಮುಗ್ಗರಿಸಿತು. ಇದೀಗ ಪಾಕ್ ಸವಾಲನ್ನು ಎಂದೂ ಒತ್ತಡವಾಗಿ ತೆಗೆದುಕೊಳ್ಳದೆ, ಬಿಂದಾಸ್ ಆಗಿ ಆಡುವುದೇ ಭಾರತದ ರಣತಂತ್ರ.
ಇದನ್ನೂ ಓದಿ | IND-PAK | ಟಿ20 ವಿಶ್ವ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಮೊದಲ ಸೋಲು ಕಂಡಿದ್ದು ಹೇಗೆ?