ಬೇಸ್ ಟೆರ್: ಸೂರ್ಯಕುಮಾರ್ ಯಾದವ್ ಅವರ ಪರಾಕ್ರಮಭರಿತ ಆಟ ಮತ್ತು ರಿಷಭ್ ಪಂತ್ ಅವರ ಮಿಂಚಿನ ಓಟಗಳ ನಡುವೆ ಸಖತ್ ಆಗಿ ಮಿಂಚಿದ ಟೀಮ್ ಇಂಡಿಯಾವು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ೨೦ ಪಂದ್ಯದಲ್ಲಿ ಏಳು ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿದೆ. ವಿಂಡೀಸ್ ಒಡ್ಡಿದ ೧೬೪ ರನ್‌ಗಳ ಗುರಿಯನ್ನು ಇನ್ನೂ ಆರು ಎಸೆತಗಳು ಇರುವಾಗಲೇ ಮೀರಿ ನಿಂತ ಟೀಮ್ ಇಂಡಿಯಾ ದೊಡ್ಡ ಗೆಲುವನ್ನು ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಟಿ೨೦ ಸರಣಿಯಲ್ಲಿ ೨-೧ರ ಮುನ್ನಡೆಯನ್ನು ಸಾಧಿಸಿತು.
ಭಾರತದ ಇನಿಂಗ್ಸನ್ನು ತಮ್ಮ ಪ್ರಖರ ಶಕ್ತಿಯಿಂದ ಬೆಳಗಿದವರು ಸೂರ್ಯಕುಮಾರ್ ಯಾದವ್. ರೋಹಿತ್ ಶರ್ಮ ಅವರೊಂದಿಗೆ ಆರಂಭಿಕನಾಗಿ ಕ್ರೀಸ್‌ಗೆ ಇಳಿದ ಸೂರ್ಯಕುಮಾರ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬೀಡುಬೀಸಾಗಿ ಆಟವಾಡಿದರು. ರೋಹಿತ್ ಶರ್ಮ ಅವರು ಐದು ಎಸೆತಗಳಲ್ಲಿ ೧೧ ರನ್‌ಗಳಿಸಿ ಉತ್ತಮವಾಗಿ ಆಟವಾಗುತ್ತಿದ್ದಾಗ ಗಾಯಗೊಂಡು ನಿವೃತ್ತರಾದರು. ಬಳಿಕ ಸೂರ್ಯಕುಮಾರ್ ಅವರದ್ದೇ ಅಬ್ಬರ. ಕೇವಲ ೪೪ ಎಸೆತಗಳಲ್ಲಿ ಎಂಟು ಬೌಂಡರಿ, ನಾಲ್ಕು ಸಿಕ್ಸರ್‌ಗಳೊಂದಿಗೆ ೭೬ ರನ್ ಬಾರಿಸಿ ತಂಡವನ್ನು ನಿರ್ಭಯಗೊಳಿಸಿದರು.
ರೋಹಿತ್ ನಿರ್ಗಮನದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಜತೆಗೂಡಿದರು. ರೋಹಿತ್ ೧೯ನೇ ರನ್‌ಗೆ ಔಟಾಗಿದ್ದರೆ, ಈ ಜೋಡಿ ತಂಡದ ಮೊತ್ತವನ್ನು ಮೊದಲ ವಿಕೆಟ್‌ಗೆ ೧೦೫ ಗಡಿ ದಾಟಿಸಿತು. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ (೨೭ ಎಸೆತದಲ್ಲಿ ೨೪) ಔಟಾದರು. ತಂಡದ ಮೊತ್ತ ೧೩೫ ಆಗಿದ್ದಾಗ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿದರು. ಆಗ ೧೪.೨ ಓವರ್ ಮುಗಿದಿತ್ತು. ಮುಂದೆ ರಿಷಭ್ ಪಂತ್ ಭಾರತ ತಂಡವನ್ನು ಗೆಲುವಿನ ಕಡೆಗೆ ಒಯ್ಯುವ ಕೆಲಸವನ್ನು ಚೆನ್ನಾಗಿ ನಿಭಾಯಿಸಿದರು. ನಡುವೆ ಹಾರ್ದಿಕ್ ಪಾಂಡ್ಯ ಬಂದು ಆರು ಎಸೆತಗಳಲ್ಲಿ ೪ ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಗೆ ರಿಷಭ್ ಪಂತ್ ೨೬ ಎಸೆತಗಳಲ್ಲಿ ೩೩ ರನ್, ದೀಪಕ್ ಹೂಡಾ ೭ ಎಸೆತಗಳಲ್ಲಿ ೧೦ ರನ್ ಗಳಿಸುವಷ್ಟರಲ್ಲಿ ಭಾರತ ಗೆದ್ದಾಗಿತ್ತು. ತಂಡದ ಕೈಯಲ್ಲಿ ಇನ್ನೂ ಆರು ಬಾಲ್‌ಗಳು ಬಾಕಿ ಇದ್ದವು. ವಿಂಡೀಸ್ ನ ಯಾವ ಬೌಲರ್‌ಗಳೂ ಯಾವ ಹಂತದಲ್ಲೂ ಭಾರತವನ್ನು ಕಟ್ಟಿ ಹಾಕಲು ಶಕ್ತವಾಗಲಿಲ್ಲ.
ಕೈಲ್ ಮೇಯರ್ಸ್ ಮೆರೆದಾಟ
ಟಾಸ್ ಗೆದ್ದು ಬೌಲಿಂಗ್ ನಡೆಸಲು ನಿರ್ಧರಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ವೆಸ್ಟ್ ಇಂಡೀಸ್ ತಂಡವನ್ನು ೧೬೪ ರನ್‌ಗಳಿಗೆ ನಿಯಂತ್ರಿಸಲು ಸಫಲರಾದರು. ಬ್ರಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಮೊದಲ ವಿಕೆಟ್‌ಗೆ ೭.೨ ಓವರ್‌ಗಳಲ್ಲಿ ೫೭ ರನ್ ಬಾರಿಸಿ ಭದ್ರ ಬುನಾದಿಯನ್ನೇ ಹಾಕಿತು. ಈ ಹಂತದಲ್ಲಿ ಬ್ರಾಂಡನ್ ಕಿಂಗ್ ಔಟಾದರೂ ಕೈಲ್ ಮೇಯರ್ಸ್ ಇನ್ನಷ್ಟು ಜೋರಾಗಿ ಅಬ್ಬರಿಸಲು ಆರಂಭಿಸಿದರು. ಅಂತಿಮವಾಗಿ ೫೦ ಎಸೆತಗಳಲ್ಲಿ ಅವರು ೭೩ ರನ್ ಗಳಿಸಿ (4×8, 6×4) ಔಟಾದಾಗ ತಂಡದ ಮೊತ್ತ ಮೂರು ವಿಕೆಟ್‌ಗೆ ೧೨೮ ಆಗಿತ್ತು. ಆಗ ೧೬.೨ ಓವರ್ ಆಗಿತ್ತು. ಮುಂದಿನ ೨೨ ಎಸೆತಗಳಲ್ಲಿ ವಿಂಡೀಸ್ ೩೪ ರನ್ ಮಾತ್ರ ಗಳಿಸಲು ಶಕ್ತವಾಯಿತು. ಇದರಲ್ಲಿ ಅರ್ಷದೀಪ್ ಎಸೆದ ೧೮ನೇ ಓವರ್‌ನಲ್ಲಿ ಸಿಕ್ಕಿದ್ದು ಕೇವಲ ೫ ರನ್. ಆವೇಶ್ ಖಾನ್ ಅವರ ೧೯ನೇ ಓವರ್‌ನಲ್ಲಿ ೧೭ ರನ್ ಸಿಕ್ಕಿದರೆ, ಅರ್ಷದೀಪ್ ಕೊನೆಯ ಓವರ್‌ನಲ್ಲಿ ಎರಡು ವಿಕೆಟ್ ಕಿತ್ತು ೯ ರನ್ ಮಾತ್ರ ನೀಡಿದರು. ಮಂಗಳವಾರ ಪಂದ್ಯದಲ್ಲಿ ಭಾರತ ರವೀಂದ್ರ ಜಡೇಜಾ ಬದಲು ದೀಪಕ್ ಹೂಡಾ ಅವರನ್ನು ಸೇರಿಸಿಕೊಂಡಿತ್ತು. ಅವರು ಒಂದು ಓವರ್ ಎಸೆದು ಕೇವಲ ಒಂದು ರನ್ ನೀಡಿದರು. ಅಂತಿಮವಾಗಿ ಭುವನೇಶ್ವರ್ ಕುಮಾರ್ ೨, ಅರ್ಷದೀಪ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ವಿಂಡೀಸ್‌ನ ಈ ಸ್ಕೋರ್ ಭಾರತಕ್ಕೆ ಎಲ್ಲಿಗೂ ಸಾಕಾಗಲಿಲ್ಲ. ಹೀಗಾಗಿ ಗೆಲುವು ಭಾರತಕ್ಕಾಯಿತು. ಸರಣಿಯಲ್ಲಿ ೨-೧ ಮುನ್ನಡೆಯೂ ಸಿಕ್ಕಿತ್ತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: ೧೬೪/೫ (೨೦ ಓವರ್)
ಕೈಲ್ ಮೇಯರ್ಸ್-೭೩, ರೋಮನ್ ಪೋವೆಲ್ ೨೩
ಭಾರತ: ೧೬೫/೩ (೧೯ ಓವರ್)
ಸೂರ್ಯಕುಮಾರ್ ಯಾದವ್ ೭೬, ರಿಷಭ್ ಪಂತ್ ೩೩
ಇದನ್ನೂ ಓದಿ| IND vs WI T20 | ಮೆಕಾಯ್, ಕಿಂಗ್ ಭರ್ಜರಿ ಆಟ, ಭಾರತದ ವಿರುದ್ಧ ವೆಸ್ಟ್‌ಇಂಡೀಸ್‌ಗೆ 5 ವಿಕೆಟ್ ಜಯ