Site icon Vistara News

IND vs AFG 1st20: ಭಾರತ-ಆಫ್ಘನ್​ ಮೊದಲ ಟಿ20 ಪಂದ್ಯದ ಪಿಚ್​ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ

Punjab Cricket Association IS Bindra Stadium Pitch

ಮೊಹಾಲಿ: 2024ನೇ ಸಾಲಿನ ಮೊದಲ ತವರಿನ ಸರಣಿಯನ್ನಾಡಲು ಭಾರತ ಸಜ್ಜಾಗಿ ನಿಂತಿದೆ. ಅಫಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ(IND vs AFG 1st T20) ಗುರುವಾರ ಆರಂಭವಾಗಲಿದೆ. ಇತ್ತಂಡಗಳ ಈ ಮುಖಾಮುಖಿ ಮೊಹಾಲಿಯಲ್ಲಿ ಏರ್ಪಡಲಿದೆ. ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ, ಸಂಭಾವ್ಯ ತಂಡ ಮತ್ತು ಇತರ ಮಾಹಿತಿ ಇಂತಿದೆ.

ಮುಖಾಮುಖಿ


ಭಾರತ ಮತ್ತು ಅಫಘಾನಿಸ್ತಾನ ತಂಡಗಳು ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಭಾರತ 4 ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಹೊಂದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ. ಆದರೆ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬಲಿಷ್ಠ ಪಾಕಿಸ್ತಾನ, ಇಂಗ್ಲೆಂಡ್​ಗೆ ಸೋಲಿನ ರುಚಿ ತೋರಿಸಿದ್ದ ಆಫ್ಘನ್ ಸವಾಲನ್ನು ಈಗ ಹಗುರವಾಗಿ ಪರಿಗಣಿಸುವಂತಿಲ್ಲ.

ಪಿಚ್​ ರಿಪೋರ್ಟ್​


ಭಾರತದ ಖ್ಯಾತ ಕ್ರಿಕೆಟ್‌ ಕ್ರೀಡಾಂಗಣಗಳಲ್ಲಿ ಒಂದಾದ, ಅನೇಕ ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾದ ಐ.ಎಸ್‌. ಬಿಂದ್ರಾ ಸ್ಟೇಡಿಯಂನ ಪಿಚ್​ ಹೆಚ್ಚಾಗಿ ಭಾರತದ ಫೇವರಿಟ್​ ಮೈದಾನವಾಗಿದೆ. ಈ ಪಿಚ್​ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿ ನೆರವು ನೀಡುತ್ತದೆ. ಆಟ ಸಾಗಿದಂತೆ ಈ ಪಿಚ್‌ನಲ್ಲಿ ಬ್ಯಾಟಿಂಗ್ ಹೆಚ್ಚು ಸವಾಲಿನದಾಗಿರುತ್ತದೆ, ಆದರೆ ಬೌಲರ್‌ಗಳು ಆಟದುದ್ದಕ್ಕೂ ಹಿಡಿತ ಸಾಧಿಸುತ್ತಾರೆ.

ಇದನ್ನೂ ಓದಿ MS Dhoni: ಐಪಿಎಲ್​ಗೆ ಅಭ್ಯಾಸ ಆರಂಭಿಸಿದ ಧೋನಿ; ವಿಡಿಯೊ ವೈರಲ್​

ಈ ಸ್ಟೇಡಿಯಂನಲ್ಲಿ ಇದುವರೆಗೆ 9 ಟಿ20 ಪಂದ್ಯಗಳು ನಡೆದಿವೆ. 5 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿವೆ. 4 ಬಾರಿ ಚೇಸಿಂಗ್​ ನಡೆಸಿದ ತಂಡ ವಿಜಯ ಸಾಧಿಸಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ನಡೆಸಿದರೆ ಉತ್ತಮ. ಮೊದಲ ಬ್ಯಾಟಿಂಗ್​ ಇನಿಂಗ್ಸ್​ನ ಸರಾಸರಿ ಮೊತ್ತ 168. ದ್ವಿತೀಯ ಇನಿಂಗ್ಸ್​ ಸರಾಸರಿ ಗಳಿಕೆ 152 ರನ್​. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 4ಕ್ಕೆ 211. ಇದು ಭಾರತ ಮತ್ತು ಲಂಕಾ ನಡುವಿನ ಪಂದ್ಯದಲ್ಲಿ ದಾಖಲಾಗಿತ್ತು.

ಹವಾಮಾನ ವರದಿ 


ಈ ಪಂದ್ಯಕ್ಕೆ ಯಾವುದೇ ಮಳೆಯ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ತಾಪಮಾನವು ಸುಮಾರು 17 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಳಿದಾಡುವ ನಿರೀಕ್ಷೆಯಿದೆ. ಮತ್ತು ಆರ್ದ್ರತೆಯ ಮಟ್ಟವು ಸುಮಾರು ಶೇ 63ರಷ್ಟಿರಲಿದೆ. ಗಾಳಿಯು ಗಂಟೆಗೆ 16 ಕಿಮೀ ವೇಗದಲ್ಲಿ ಬೀಸಲಿದೆ.


ಸಂಭಾವ್ಯ ತಂಡ


ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಅಕ್ಷರ್​ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶ್​ದೀಪ್​ ಸಿಂಗ್, ಮುಖೇಶ್ ಕುಮಾರ್.

ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಕೈಸ್ ಅಹ್ಮದ್.

Exit mobile version