ಬೆಂಗಳೂರು: ಅತ್ಯಂತ ರೋಚಕವಾಗಿ ಸಾಗಿದ, ಎರಡು ಸೂಪರ್ ಓವರ್ ಕಂಡ ಅಫಘಾನಿಸ್ತಾನ(IND vs AFG) ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ಗೈದ ಸಾಧನೆ ಮಾಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. 22 ರನ್ ಒಟ್ಟುಗೂಡುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಇನ್ನೇನು 100 ರನ್ ಮಾಡುವುದು ಕಷ್ಟ ಎನ್ನುವ ಹಂತದಲ್ಲಿ ನಾಯಕ ರೋಹಿತ್ ಶರ್ಮ(121*) ಮತ್ತು ರಿಂಕು ಸಿಂಗ್(69*) ಅವರ ಸಮಯೋಚಿತ ಬ್ಯಾಟಿಂಗ್ ನಡೆಸಿದ ಪರಿಣಾಮ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತು. ಬೃಹತ್ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿದ ಅಫಘಾನಿಸ್ತಾನ ಅಂತಿಮ ಎಸೆತದಲ್ಲಿ ಗೆಲುವಿಗೆ 3 ರನ್ ತೆಗೆಯುವ ಸವಾಲಿಗೆ ಸಿಲುಕಿತು. ಆದರೆ 2 ರನ್ ಗಳಿಸಿದ ಗುಲ್ಬದಿನ್ ಪಂದ್ಯವನ್ನು ಟೈ ಮಾಡಿಸಿದರು. ಆಫ್ಘನ್ 6 ವಿಕಟ್ಗೆ 212 ರನ್ ಬಾರಿಸಿತು.
ಸೂಪರ್ ಓವರ್ ಕೂಡ ಟೈ…
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಮೊದಲ ಎಸೆತದಲ್ಲೇ 2 ರನ್ಗಳಿಸುವ ಸಾಹಸಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ನಬಿ ಮತ್ತು ಗುಲ್ಬದಿನ್ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ 16 ರನ್ ಗಳಿಸಿದರು. ಭಾರತ ಪರ ಮುಖೇಶ್ ಕುಮಾರ್ ಸೂಪರ್ ಓವರ್ ಎಸೆದರು. 17 ರನ್ಗಳ ಗೆಲುವಿನ ಗುರಿ ಪಡೆದ ಭಾರತ ಮೊದಲ ಎರಡು ಎಸೆತಗಳಲ್ಲಿ 2 ರನ್ ಗಳಿಸಿತು. ಮೂರನೇ ಮತ್ತು ನಾಲ್ಕನೇ ಎತೆತಗಳನ್ನು ನಾಯಕ ರೋಹಿತ್ ಸಿಕ್ಸರ್ಗೆ ಬಡಿದಟ್ಟಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಯಶಸ್ವಿ ಜೈಸ್ವಾಲ್ ಒಂದು ರನ್ಗಳಿಸಲಷ್ಟೇ ಶಕ್ತರಾದರು. ಮತ್ತೆ ಪಂದ್ಯ ಟೈಗೊಂಡು 2ನೇ ಸೂಪರ್ ಓವರ್ಗೆ ಸಾಗಿತು.
ದ್ವಿತೀಯ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಭಾರತಕ್ಕೆ ರೋಹಿತ್ ಶರ್ಮ ಮೊದಲ ಎಸೆತದಲ್ಲೇ ಸಿಕ್ಸರ್, ದ್ವಿತೀಯ ಎಸೆತದಲ್ಲಿ ಬೌಂಡರಿ ಬಾರಿಸಿ ಮುನ್ನಡೆ ತಂದುಕೊಟ್ಟರು. ಆದರೆ, ಬಳಿಕ 2 ಎಸೆತಗಳಲ್ಲಿ ರಿಂಕು ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 12 ರನ್ಗಳ ಗೆಲುವಿನ ಗುರಿ ಪಡೆದ ಅಫಘಾನಿಸ್ತಾನ ರವಿ ಬಿಷ್ಣೋಯ್ ಅವರ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿತು. ನಬಿ ಅವರು ಸಿಕ್ಸರ್ಗೆ ಬಾರಿಸಿದ ಚೆಂಡನ್ನು ಬೌಂಡರಿ ಲೈನ್ನಲ್ಲಿ ರಿಂಕು ಸಿಂಗ್ ಕ್ಯಾಚ್ ಪಡೆದು ಈ ವಿಕೆಟ್ ಪತನಕ್ಕೆ ಕಾರಣರಾದರು. ಮೂರನೇ ಎಸೆತದಲ್ಲಿಯೂ ರಿಂಕು ಸಿಂಗ್ ಅವರು ಗುರ್ಬಾಜ್ ಅವರ ಕ್ಯಾಚ್ ಪಡೆದು ಆಫ್ಘನ್ಗೆ ಸೋಲುಣಿಸಿದರು. 2 ವಿಕೆಟ್ ಕಿತ್ತ ಬಿಷ್ಣೋಯ್ ಗೆಲುವಿನ ಹೀರೊ ಎನಿಸಿದರು. ಆಫ್ಘನ್ ಕೇವಲ ಒಂದು ರನ್ ಮಾತ್ರ ಗಳಿಸಿತು.
A tied match 😮
— ICC (@ICC) January 17, 2024
A tied Super Over 😱
India win the second Super Over to seal a 3-0 whitewash 🙌#INDvAFG 📝: https://t.co/DWK9Rn6PsN pic.twitter.com/gvQGEJVHMC
ಭಾರತದ ಬೃಹತ್ ಮೊತ್ತ ಬೆನ್ನಟ್ಟಿದ ಆಫ್ಘನ್ಗೆ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್(50) ಮತ್ತು ನಾಯಕ ಇಬ್ರಾಹಿಂ ಜದ್ರಾನ್(50) ಅರ್ಧಶತಕ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 93 ರನ್ಗಳ ಜತೆಯಾಟ ನಡೆಸಿತು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಬಂದ ಗುಲ್ಬದಿನ್ ನೈಬ್ ಮತ್ತು ಅನುಭವಿ ಮೊಹಮ್ಮದ್ ನಬಿ ಕೂಟ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತೀಯ ಬೌಲರ್ಗಳನ್ನು ಕಾಡಿದರು. ಈ ಜೋಡಿಯ ಬ್ಯಾಟಿಂಗ್ ನೋಡುವಾಗ ಪಂದ್ಯವನ್ನು ಗದ್ದೇ ಬಿಡುವ ಸೂಚನೆಯೊಂದು ದಟ್ಟವಾಯಿತು. ಆದರೆ ನಬಿ ವಿಕೆಟ್ ಪತನದ ಬಳಿಕವೂ ಛಲ ಬಿಡದ ಗುಲ್ಬದಿನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಅವರು ತಲಾ 4 ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅಜೇಯ 55 ರನ್ ಗಳಿಸಿದರು.
ಮೊಹಮ್ಮದ್ ನಬಿ ಕೇವಲ 16 ಎಸೆತಗಳಿಂದ 3 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿ 34 ರನ್ ಗಳಿಸಿದರು. ಬೌಂಡರಿ ಲೈನ್ನಲ್ಲಿ ಅವೇಶ್ ಖಾನ್ ಹಿಡಿದ ಸೂಪರ್ ಕ್ಯಾಚ್ಗೆ ವಿಕೆಟ್ ಕೈಚೆಲ್ಲಿದರು. ಭಾರತ ಪರ ವಾಷಿಂಗ್ಟನ್ ಸುಂದರ್ ಮೂರು ವಿಕೆಟ್ ಕಿತ್ತರು. ಉಳಿದ ಎಲ್ಲ ಬೌಲರ್ಗಳು ಓವರ್ಗೆ 10ರಂತೆ ರನ್ ಬಿಟ್ಟುಕೊಟ್ಟು ಸರಿಯಾಗಿ ದಂಡಿಸಿಕೊಂಡರು.
ನಾಯಕನ ಆಟವಾಡಿದ ರೋಹಿತ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತಕ್ಕೆ ರೋಹಿತ್ ಶರ್ಮ ಶತಕ ಬಾರಿಸುವ ಮೂಲಕ ನೆರವಾದರು. ಇವರಿಗೆ ರಿಂಕು ಸಿಂಗ್ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಆಫ್ಘನ್ ಬೌಲರ್ಗಳ ಮೇಲೆರಗಿ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ನೆರದಿದ್ದ ಪ್ರೇಕ್ಷಕರಿಗೆ ಟಿ20ಯ ರಸದೌತಣ ನೀಡಿದರು.
ರಿಂಕು ಸಿಂಗ್ ಕೂಡ ಅರ್ಧಶತಕ ಬಾರಿಸಿ ತಂಡದ ಬೃಹತ್ ಮೊತಕ್ಕೆ ಕಾರಣರಾದರು. ರಿಂಕು ಮತ್ತು ರೋಹಿತ್ ಸೇರಿಕೊಂಡು 5ನೇ ವಿಕೆಟ್ಗೆ ಅಜೇಯ 190 ರನ್ ಜತೆಯಾಟ ನಡೆಸಿದರು. ರೋಹಿತ್ ಶರ್ಮ 69 ಎಸೆತಗಳಿಂದ 11 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ ಅಜೇಯ 121 ರನ್ ಬಾರಿಸಿದರು. ರಿಂಕು 38 ಎಸೆತ ಎದುರಿಸಿ ಅಜೇಯ 63 ರನ್ ಗಳಿಸಿದರು. ಸಿಡಿದದ್ದು 6 ಸಿಕ್ಸರ್ ಮತ್ತು 2 ಬೌಂಡರಿ. ಅದರಲ್ಲೂ ಕೊನೆಯ ಓವರ್ ಎಸೆದ ಕರೀಂ ಜನ್ನತ್ಗೆ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಮಿಂಚಿದರು. ಈ ಓವರ್ನಲ್ಲಿ ಒಟ್ಟು 36 ರನ್ ಹರಿದು ಬಂತು. ಆಫ್ಘನ್ ಪರ ಬೌಲಿಂಗ್ನಲ್ಲಿ ಮಿಂಚಿದ ಆಟಗಾರನೆಂದರೆ ಫರೀದ್ ಅಹ್ಮದ್ ಮಾತ್ರ. ಅವರು 4 ಓವರ್ ಎಸೆದು 20 ರನ್ ನೀಡಿ 3 ವಿಕೆಟ್ ಕಿತ್ತರು.
ಕೊಹ್ಲಿ, ಸಂಜು ಗೋಲ್ಡನ್ ಡಕ್
ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಆಟ ನೋಡಲೆಂದೇ ಆರ್ಸಿಬಿ ಅಭಿಮಾನಿಗಳು ಈ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಕೊಹ್ಲಿ ಗೋಲ್ಡನ್ ಡಕ್ಗೆ ವಿಕೆಟ್ ಕೈಚೆಲ್ಲಿ ಎಲ್ಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ದ್ವಿತೀಯ ಪಂದ್ಯದಲ್ಲಿ ಅಜೇಯ ಅಧರ್ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಈ ಪಂದ್ಯದಲ್ಲಿ ಯಶಸ್ಸು ಕಾಣಲಿಲ್ಲ. 6 ಎಸೆತ ಎದುರಿಸಿ 4 ರನ್ಗೆ ಔಟಾದರು. ಶಿವಂ ದುಬೆ ಒಂದಕಕ್ಕೆ ಸೀಮಿತರಾದರು.
ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಗದೆ ಈ ಪಂದ್ಯದಲ್ಲಿ ಆಡಲಿಳಿದ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು.