ಮೊಹಾಲಿ: ಭಾರತ ಮತ್ತು ಅಫಘಾನಿಸ್ತಾನ(IND vs AFG) ತಂಡಗಳ ನಡುವೆ ಇಂದು ಮೊಹಾಲಿಯಲ್ಲಿ ಮೊದಲ ಟಿ20 ಪಂದ್ಯ ನಡಯಲಿದೆ.(India vs Afghanistan, 1st T20I) ಈ ಪಂದ್ಯಕ್ಕೆ ಮಳೆಯ ಕಾಟ ಇರದೇ ಇದ್ದರೂ ಕೂಡ ಮಂಜಿನ ಸಮಸ್ಯೆ ಇರಲಿದೆ. ಮೊಹಾಲಿಯಲ್ಲಿ ವಿಪರೀತ ಚಳಿ ಇದ್ದು ಆಟಗಾರರು ಬೆಚ್ಚನೆಯ ಉಡುಪು ಧರಿಸಿ ಅಭ್ಯಾಸ ನಡೆಸಿದ್ದಾರೆ. ತಂಡದ ಕೋಚ್ ದ್ರಾವಿಡ್ ಕೂಡ ಬುಧವಾರ ನಡೆದ ಸುದ್ದಿಗೋಷ್ಠಿ ವೇಳೆ ಮಂಕಿ ಕ್ಯಾಪ್ ಧರಿಸಿಸಿದ್ದು ಕಂಡು ಬಂತು.
ಚಳಿಯ ವಾತಾವರಣ ಇರುವುದರಿಂದ ವೇಗದ ಬೌಲರ್‌ಗಳು ಸ್ನಾಯು ಸೆಳೆತಕ್ಕೆ ಒಳಗಾಗುವ ಭೀತಿ ಇದೆ. ಅಲ್ಲದೆ ಇಬ್ಬನಿ ಕಾಟದಿಂದಾಗಿ ನಿರ್ಧಿಷ್ಟ ಲೆಂತ್ ಮತ್ತು ಲೈನ್ನಲ್ಲಿ ಬೌಲಿಂಗ್ ನಡೆಸುವುದು ಕೂಡ ಸವಾಲಿನಿಂದ ಕೂಡಿರಲಿದೆ. ರಾತ್ರಿಯ ವೇಳೆ ವಿಪರೀತ ಮಂಜು ಬೀಳುವ ಕಾರಣ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಂಡು ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬೇಕಿದೆ.
ಜೈಸ್ವಾಲ್ ಆರಂಭಿಕ
ನಾಯಕ ರೋಹಿತ್ ಶರ್ಮಾ ಜತೆಗೆ ಯಶಸ್ವಿ ಜೈಸ್ವಾಲ್ ಓಪನಿಂಗ್ ಮಾಡಲಿದ್ದಾರೆ. ಈ ವಿಚಾರವನ್ನು ಈಗಾಗಲೇ ತಂಡದ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ತಮ್ಮ ಪುತ್ರಿಯ ಹುಟ್ಟುಹಬ್ಬದ ಕಾರಣದಿಂದ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಶುಭಮನ್ ಗಿಲ್ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ ಮತ್ತು ಶಿವಂ ದುಬೆ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವ ಅಗತ್ಯವಿದೆ.
ಪಿಚ್ ರಿಪೋರ್ಟ್
ಭಾರತದ ಖ್ಯಾತ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ, ಅನೇಕ ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾದ ಐ.ಎಸ್. ಬಿಂದ್ರಾ ಸ್ಟೇಡಿಯಂನ ಪಿಚ್ ಹೆಚ್ಚಾಗಿ ಭಾರತದ ಫೇವರಿಟ್ ಮೈದಾನವಾಗಿದೆ. ಈ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿ ನೆರವು ನೀಡುತ್ತದೆ. ಆಟ ಸಾಗಿದಂತೆ ಈ ಪಿಚ್‌ನಲ್ಲಿ ಬ್ಯಾಟಿಂಗ್ ಹೆಚ್ಚು ಸವಾಲಿನದಾಗಿರುತ್ತದೆ, ಆದರೆ ಬೌಲರ್‌ಗಳು ಆಟದುದ್ದಕ್ಕೂ ಹಿಡಿತ ಸಾಧಿಸುತ್ತಾರೆ.
ಇದನ್ನೂ ಓದಿ IND vs AFG 1st T20: ಅಪಾಯಕಾರಿ ಆಫ್ಘನ್ ಸವಾಲು ಎದರಿಸಲು ಸಿದ್ಧವಾದ ಟೀಮ್ ಇಂಡಿಯಾ
ಈ ಸ್ಟೇಡಿಯಂನಲ್ಲಿ ಇದುವರೆಗೆ 9 ಟಿ20 ಪಂದ್ಯಗಳು ನಡೆದಿವೆ. 5 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದಿವೆ. 4 ಬಾರಿ ಚೇಸಿಂಗ್ ನಡೆಸಿದ ತಂಡ ವಿಜಯ ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸಿದರೆ ಉತ್ತಮ. ಮೊದಲ ಬ್ಯಾಟಿಂಗ್ ಇನಿಂಗ್ಸ್ನ ಸರಾಸರಿ ಮೊತ್ತ 168. ದ್ವಿತೀಯ ಇನಿಂಗ್ಸ್ ಸರಾಸರಿ ಗಳಿಕೆ 152 ರನ್. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 4ಕ್ಕೆ 211. ಇದು ಭಾರತ ಮತ್ತು ಲಂಕಾ ನಡುವಿನ ಪಂದ್ಯದಲ್ಲಿ ದಾಖಲಾಗಿತ್ತು.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್ ವರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಿವಂ ದುಬೆ, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಆವೇಶ್ ಖಾನ್.
ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಕೈಸ್ ಅಹ್ಮದ್.