ಬೆಂಗಳೂರು: ನಾಯಕ ರೋಹಿತ್ ಶರ್ಮ(121*) ಮತ್ತು ರಿಂಕು ಸಿಂಗ್(69*) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಅಫಘಾನಿಸ್ತಾನ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 212 ರನ್ ಗಳಿಸಿದೆ. ಆಫ್ಘನ್ ಗೆಲುವಿಗೆ 213 ರನ್ ಬಾರಿಸಬೇಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. 22 ರನ್ ಒಟ್ಟುಗೂಡುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಇನ್ನೇನು 100 ರನ್ ಮಾಡುವುದು ಕಷ್ಟ ಎನ್ನುವ ಹಂತದಲ್ಲಿ ನಾಯಕ ರೋಹಿತ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ರಿಂಕು ಸೀರಿಕೊಂಡು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ರಕ್ಷಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್ ಸಾಹಸದಿಂದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿದೆ.
ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಕೊಹ್ಲಿ
ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಆಟ ನೋಡಲೆಂದೇ ಆರ್ಸಿಬಿ ಅಭಿಮಾನಿಗಳು ಈ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಕೊಹ್ಲಿ ಗೋಲ್ಡನ್ ಡಕ್ಗೆ ವಿಕೆಟ್ ಕೈಚೆಲ್ಲಿ ಎಲ್ಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ದ್ವಿತೀಯ ಪಂದ್ಯದಲ್ಲಿ ಅಜೇಯ ಅಧರ್ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಈ ಪಂದ್ಯದಲ್ಲಿ ಯಶಸ್ಸು ಕಾಣಲಿಲ್ಲ. 6 ಎಸೆತ ಎದುರಿಸಿ 4 ರನ್ಗೆ ಔಟಾದರು. ಶಿವಂ ದುಬೆ ಒಂದಕಕ್ಕೆ ಸೀಮಿತರಾದರು.
ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಗದೆ ಈ ಪಂದ್ಯದಲ್ಲಿ ಆಡಲಿಳಿದ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು.
ನಾಯಕನ ಆಟವಾಡಿದ ರೋಹಿತ್
ಆಫ್ಘನ್ನ ಯುವ ಎಡಗೈ ವೇಗಿ ಫರೀದ್ ಅಹ್ಮದ್ ಅವರ ಮೊನಚಾದ ಬೌಲಿಂಗ್ ದಾಳಿಗೆ ಬಡಬಡನೆ ವಿಕೆಟ್ ಬೀಳುತ್ತಿದ್ದರೂ ಧೃತಿಗೆಡದೆ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮ ಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಇವರಿಗೆ ರಿಂಕು ಸಿಂಗ್ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಆಫ್ಘನ್ ಬೌಲರ್ಗಳ ಮೇಲೆರಗಿ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ನೆರದಿದ್ದ ಪ್ರೇಕ್ಷಕರಿಗೆ ಟಿ20ಯ ರಸದೌತಣ ನೀಡಿದರು.
🚨 Milestone Alert 🚨
— BCCI (@BCCI) January 17, 2024
Most T20I hundreds in Men's cricket! 🔝 👏
Take. A. Bow Rohit Sharma 🙌 🙌
Follow the Match ▶️ https://t.co/oJkETwOHlL#TeamIndia | #INDvAFG | @IDFCFIRSTBank pic.twitter.com/J0hALcdhuF
ಕೊಹ್ಲಿ ದಾಖಲೆ ಪತನ
ಆರಂಭಿಕ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ ರೋಹಿತ್ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ಜತೆಗೆ ತಮ್ಮ ವಿರುದ್ಧದ ಎಲ್ಲ ಟೀಕೆಗೂ ಈ ಪ್ರದರ್ಶನದ ಮೂಲಕ ಉತ್ತರ ನೀಡಿದರು. ರೋಹಿತ್ 44 ರನ್ ಗಳಿಸುತ್ತಿದ್ದಂತೆ ನಾಯಕನಾಗಿ ಭಾರತ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ ನಾಯಕನಾಗಿ 1570 ರನ್ ಬಾರಿಸಿದ್ದರು. ಇದೀಗ ರೋಹಿತ್ ಈ ದಾಖಲೆಯನ್ನು ಮುರಿದಿದ್ದಾರೆ.
ಟಿ20ಯಲ್ಲಿ ದಾಖಲೆ ಬರೆದ ರೋಹಿತ್
ರೋಹಿತ್ ಶರ್ಮ ಅವರು ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇದು ರೋಹಿತ್ ಅವರ 5ನೇ ಅಂತಾರಾಷ್ಟ್ರೀಯ ಟಿ20 ಶತಕ. 4 ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ ಮತ್ತು ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ರಿಂಕು ಸಿಂಗ್ ಕೂಡ ಅರ್ಧಶತಕ ಬಾರಿಸಿ ತಂಡದ ಬೃಹತ್ ಮೊತಕ್ಕೆ ಕಾರಣರಾದರು. ರಿಂಕು ಮತ್ತು ರೋಹಿತ್ ಸೇರಿಕೊಂಡು 5ನೇ ವಿಕೆಟ್ಗೆ ಅಜೇಯ 190 ರನ್ ಜತೆಯಾಟ ನಡೆಸಿದರು. ರೋಹಿತ್ ಶರ್ಮ 69 ಎಸೆತಗಳಿಂದ 11 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ ಅಜೇಯ 121 ರನ್ ಬಾರಿಸಿದರು. ರಿಂಕು 38 ಎಸೆತ ಎದುರಿಸಿ ಅಜೇಯ 63 ರನ್ ಗಳಿಸಿದರು. ಸಿಡಿದದ್ದು 6 ಸಿಕ್ಸರ್ ಮತ್ತು 2 ಬೌಂಡರಿ. ಅದರಲ್ಲೂ ಕೊನೆಯ ಓವರ್ ಎಸೆದ ಕರೀಂ ಜನ್ನತ್ಗೆ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಮಿಂಚಿದರು. ಈ ಓವರ್ನಲ್ಲಿ ಒಟ್ಟು 36 ರನ್ ಹರಿದು ಬಂತು. ಆಫ್ಘನ್ ಪರ ಬೌಲಿಂಗ್ನಲ್ಲಿ ಮಿಂಚಿದ ಆಟಗಾರನೆಂದರೆ ಫರೀದ್ ಅಹ್ಮದ್ ಮಾತ್ರ. ಅವರು 4 ಓವರ್ ಎಸೆದು 20 ರನ್ ನೀಡಿ 3 ವಿಕೆಟ್ ಕಿತ್ತರು.