ಬಾರ್ಬಡೋಸ್: ಬಲಿಷ್ಠ ಮತ್ತು ಅನುಭವಿ ಆಟಗಾರರನ್ನು ನೆಚ್ಚಿಕೊಂಡಿದ್ದ ನ್ಯೂಜಿಲ್ಯಾಂಡ್ಗೆ ಸೋಲುಣಿಸಿ ಅಪಾಯಕಾರಿ ಎನಿಸಿಕೊಂಡಿರುವ ಅಫಘಾನಿಸ್ತಾನ(IND vs AFG) ತಂಡದ ವಿರುದ್ಧ ಭಾರತ ತಂಡ ನಾಳೆ ನಡೆಯುವ ಸೂಪರ್-8 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ನಡುವಣ ಈ ಪಂದ್ಯವನ್ನು ‘ಸೂಪರ್-8 ಫೈಟ್’ ಎಂದೇ ಬಿಂಬಿಸಲಾಗಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಪ್ರಸಾರಗೊಳ್ಳಲಿದೆ.
ಕಡೆಗಣನೆ ಸಲ್ಲ
ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ತಂಡ ಅಫಘಾನಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಜತೆಗೆ ಈ ಬಾರಿಯ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಸಹಜವಾಗಿಯೇ ಟೀಮ್ ಬಲಿಷ್ಠ ಎನ್ನಬಹುದು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ತಂಡದ ಪ್ರಮುಖ ಆಟಗಾರರು. ಆದರೆ, ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು.
ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಆಫ್ಘಾನ್ ತಂಡ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು 75 ರನ್ಗೆ ಆಲೌಟ್ ಮಾಡಿ ಸೋಲುಣಿಸಿದ್ದು, ನ್ಯೂಜಿಲ್ಯಾಂಡ್, ಪಾಕಿಸ್ತಾನ ಲೀಗ್ ಹಂತದಲ್ಲೇ ಹೊರಬಿದ್ದಿದ್ದು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.
ಫಾರ್ಮ್ಗೆ ಮರಳ ಬೇಕು ಕೊಹ್ಲಿ
ಪ್ರತಿ ಬಾರಿಯೂ ಮಹತ್ವದ ಕೂಡದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ವಿರಾಟ್ ಕೊಹ್ಲಿಯ ಬ್ಯಾಟ್ ಈ ಬಾರಿ ಸದ್ದು ಮಾಡುತ್ತಿಲ್ಲ. ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಇದರಲ್ಲೊಂದು ಗೋಲ್ಡನ್ ಡಕ್ ಕೂಡ ಒಳಗೊಂಡಿದೆ. ಇದೀಗ ಮಹತ್ವದ ಸೂಪರ್-8 ಹಂತದ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಮತ್ತು ಒತ್ತಡ ಅವರ ಮೇಲಿದೆ.
ಇದನ್ನೂ ಓದಿ IND vs AFG: ನಾಳೆ ಆಫ್ಘಾನ್ ವಿರುದ್ಧ ಸೂಪರ್-8 ಫೈಟ್; ವಿಂಡೀಸ್ ನೆಲದಲ್ಲಿ ಭಾರತದ ಟಿ20 ದಾಖಲೆ ಹೇಗಿದೆ?
ಭಾರತ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಂಡೀಸ್ ಸ್ಪಿನ್ ಸ್ನೇಹಿ ಮತ್ತು ನಿಧಾನ ಗತಿಯ ಪಿಚ್ ಆಗಿರುವ ಕಾರಣ ಭಾರತ ಹೆಚ್ಚುವರಿ ಸ್ಪಿನ್ನರ್ ಆಯ್ಕೆ ಮಾಡಿಕೊಳ್ಳಬಹುದು. ಮಧ್ಯಮ ವೇಗಿ ಆಲ್ರೌಂಡರ್ ಆಗಿರುವ ಶಿವಂ ದುಬೆ ಅವರನ್ನು ಕೈಬಿಟ್ಟು ಈ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಅಥವಾ ಯಜುವೇಂದ್ರ ಚಹಲ್ ಅವರನ್ನು ಆಡಿಸಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಅನುಮಾನ. ರೋಹಿತ್ ಮತ್ತು ಕೊಹ್ಲಿಯೇ ಭಾರತದ ಇನಿಂಗ್ಸ್ ಆರಂಭಿಸಬಹುದು.
ಆಫ್ಘಾನ್ ಕೂಡ ಬಲಿಷ್ಠ
ಅಫಘಾನಿಸ್ತಾನ ಕೂಡ ಈ ಬಾರಿ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿ ಗೋಚರಿಸಿದೆ. ಅದೂ ಅಲ್ಲದೆ ವಿಂಡೀಸ್ ನೆಲದಲ್ಲೇ ಆಫ್ಘಾನ್ ಲೀಗ್ ಪಂದ್ಯ ಕೂಡ ಆಡಿತ್ತು. ಇದರ ಲಾಭ ಕೂಡ ತಂಡಕ್ಕಿದೆ. ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್ ಬ್ಯಾಟಿಂಗ್ ಬಲವಾದರೆ, ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಫಜಲ್ಹಕ್ ಫಾರೂಕಿ(12 ವಿಕೆಟ್) ಅವರ ಘಾತಕ ಬೌಲಿಂಗ್ ದಾಳಿ, ರಶೀದ್ ಖಾನ್ ಮತ್ತು ನಬಿ ಅವರ ಸ್ಪಿನ್ ಮ್ಯಾಜಿಕ್ ಇವೆಲ್ಲವನ್ನು ಒಳಗೊಂಡ ಆಫ್ಘಾನ್ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ.