ಇಂದೋರ್: ಆರಂಭದಲ್ಲಿ ಶ್ರೇಯಸ್ ಅಯ್ಯರ್(105) ಮತ್ತು ಶುಭಮನ್ ಗಿಲ್(104) ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್ ರಾಹುಲ್(52) ಹಾಗೂ ಸೂರ್ಯಕುಮಾರ್ ಯಾದವ್(72*) ಅವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಆಸೀಸ್ ವಿರುದ್ಧ ದ್ವಿತೀಯ ಏಕದಿನ(IND vs AUS 2nd ODI) ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದೆ.
ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಪೇರಿಸಿ ಸವಾಲೊಡ್ಡಿದೆ. ಆಸ್ಟ್ರೇಲಿಯಾ ಗೆಲುವಿಗೆ ಭರ್ತಿ 400 ರನ್ ಬಾರಿಸಬೇಕಿದೆ.
ಗಿಲ್-ಅಯ್ಯರ್ ಬೊಂಬಾಟ್ ಬ್ಯಾಟಿಂಗ್
ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್ ಆರಂಭದಲ್ಲಿ ಸತತ 2 ಬೌಂಡರಿ ಬಾರಿಸಿದರೂ ಇದೇ ಜೋಶ್ ಮುಂದುವರಿಸುವಲ್ಲಿ ಎಡವಿದರು. 8 ರನ್ ಗಳಿಸಿದ್ದ ವೇಳೆ ಜೋಶ್ ಹ್ಯಾಜಲ್ ವುಡ್ಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ಬಳಿಕ ದ್ವಿತೀಯ ವಿಕೆಟ್ಗೆ ಜತೆಯಾದ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಆಸೀಸ್ ಬೌಲರ್ಗಳ ಬೆವರಿಳಿಸಿದರು. ಪ್ರತಿ ಓವರ್ಗೂ ಸಿಕ್ಸರ್ ಅಥವಾ ಬೌಂಡರಿ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಗಿಲ್ ಅವರಿಗಿಂತ ಕೊಂಚ ಮಟ್ಟಿನ ಬಿರುಸಿನ ಆಟವಾಡಿದ ಶ್ರೇಯಸ್ ಅಯ್ಯರ್ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಮೂರನೇ ಏಕದಿನ ಶತಕವಾಗಿದೆ. ಬೆನ್ನು ನೋವಿನಿಂದ ಚೇತರಿಕೆ ಕಂಡ ಬಳಿಕ ತೋರಿದ ಶ್ರೇಷ್ಠ ಪ್ರದರ್ಶನ ಇದಾಗಿದೆ. ಅವರ ಈ ಪ್ರಚಂಡ ಬ್ಯಾಟಿಂಗ್ ಕಂಡು ಆಯ್ಕೆ ಸಮಿತಿ ನಿಟ್ಟುಸಿರು ಬಿಟ್ಟಿದೆ. ಏಕೆಂದರೆ ವಿಶ್ವಕಪ್ಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಅಯ್ಯರ್ ಅವರ ಗಾಯ ಮತ್ತು ಫಾರ್ಮ್ ಬಗ್ಗೆ ಆಯ್ಕೆ ಸಮಿತಿ ಇದುವರೆಗೂ ಚಿಂತಿಸುತ್ತಿತ್ತು. ಈ ಪ್ರದರ್ಶನ ಕಂಡ ಬಳಿಕ ಸದ್ಯ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಅಯ್ಯರ್ ಮೇಲೆ ಆತ್ಮವಿಶ್ವಾಸವೊಂದು ಮೂಡಿದೆ.
ಶತಕದ ಮೂಲಕ ದಾಖಲೆ ಬರೆದ ಗಿಲ್
ಅಯ್ಯರ್ ಅವರು ಶತಕ ಪೂರ್ತಿಗೊಳಿಸಿದ್ದೇ ತಡ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಗಿಲ್ ಕೂಡ ಶತಕ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 6ನೇ ಶತಕವನ್ನು ಪೂರೈಸಿದರು. ಅಲ್ಲದೆ ಕ್ಯಾಲೆಂಡರ್ ವರ್ಷವೊಂದರಲ್ಲಿ 5ಕ್ಕಿಂತ ಅಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರು. ಇದೇ ವೇಳೆ ಅತಿ ಕಡಿಮೆ ಇನಿಂಗ್ಸ್ನಲ್ಲಿ ಭಾರತ ಪರ 6 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಧವನ್ ಅವರ ಹೆಸರಿನಲ್ಲಿತ್ತು. ಧವನ್ 46 ಇನಿಂಗ್ಸ್ನಲ್ಲಿ ಈ ದಾಖಲೆ ಬರೆದಿದ್ದರು. ಆದರೆ ಗಿಲ್ ಕೇವಲ 35 ಇನಿಂಗ್ಸ್ನಲ್ಲಿ ಈ ದಾಖಲೆ ಮೀರಿನಿಂತರು.
Target – 4⃣0⃣0⃣
— ICC (@ICC) September 24, 2023
India post their highest total against Australia in ODIs 😮
📝 #INDvAUS: https://t.co/i5UtI8EEud pic.twitter.com/sZGOg5f5kh
ಭರ್ಜರಿ ಜತೆಯಾಟ
ಶ್ರೇಯಸ್ ಅಯ್ಯರ್ ಮತ್ತು ಗಿಲ್ ಸೇರಿಕೊಂಡು ದ್ವಿತೀಯ ವಿಕೆಟ್ಗೆ ಭರ್ತಿ 200 ರನ್ಗಳ ಜತೆಯಾಟ ನಡೆಸಿದರು. ಅಯ್ಯರ್ ಅವರು 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿದರೆ, ಶುಭಮನ್ ಗಿಲ್ 97 ಎಸೆತದಿಂದ 104 ರನ್ ಬಾರಿಸಿದರು. ಈ ವೇಳೆ 6 ಬೌಂಡಿ ಮತ್ತು 4 ಸಿಕ್ಸರ್ ಸಿಡಿಯಿತು.
ಇದನ್ನೂ ಓದಿ Shubman Gill: ಗಿಲ್ ಶತಕಕ್ಕೆ ಸಚಿನ್ ಸೇರಿ ಹಲವು ದಿಗ್ಗಜರ ದಾಖಲೆ ಪತನ
ಸಿಡಿದ ರಾಹುಲ್-ಸೂರ್ಯ
ಅಯ್ಯರ್ ಮತ್ತು ಗಿಲ್ ಅವರ ವಿಕೆಟ್ ಪತನದ ಬಳಿಕ ಜತೆಯಾದ ನಾಯಕ ಕೆ.ಎಲ್ ರಾಹುಲ್ ಮತ್ತು ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಕೂಡ ಆಸೀಸ್ ಬೌಲರ್ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿ ಸುರಿಮಳೆ ಸುರಿದರು. ಕ್ಯಾಮರೂನ್ ಗ್ರೀನ್ ಅವರ ಓವರ್ ಒಂದರಲ್ಲಿ ಸೂರ್ಯಕುಮಾರ್ ಸತತ 4 ಸಿಕ್ಸರ್ ಚಚ್ಚಿ ಮಿಂಚಿದರು. ರಾಹುಲ್ ಅವರು ಸಿಕ್ಸರ್ ಮೂಲಕವೇ ಖಾತೆ ತೆರೆದರು. ಮೊದಲ ಪಂದ್ಯದಂತೇ ಈ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ನಾಯಕನ ಆಟವಾಡಿದರು. ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 52 ರನ್ ಗಳಿಸಿ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಮತ್ತು ಸೂರ್ಯ ಸೇರಿಕೊಂಡು 5ನೇ ವಿಕೆಟ್ಗೆ 53 ರನ್ ರಾಶಿ ಹಾಕಿದರು. ಇಶಾನ್ ಕಿಶನ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ 18 ಎಸೆತದಲ್ಲಿ 31 ರನ್ ಪೇರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
ಸೂರ್ಯಕುಮಾರ್ ಅವರು ಕೊನೆಯ ತನಕ ನಿಂತು ಉತ್ತಮ ಆಡವಾಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅವರು ಅಂತಿವಾಗಿ ತಲಾ 6 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಅಜೇಯ 72 ರನ್ ಗಳಿಸಿದರು. ಜಡೇಜಾ 13 ರನ್ ಬಾರಿಸಿ ಅಜೇಯರಾಗಿ ಉಳಿದರು. ಒಟ್ಟಾರೆ ಭಾರತ ತಂಡ ಈ ಪಂದ್ಯದಲ್ಲಿ 18 ಸಿಕ್ಸರ್ ಬಾರಿಸಿತು. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ನಡಿದಿದ್ದ ಏಕದಿನ ಪಂದ್ಯದಲ್ಲಿ ಭಾರತ 19 ಸಿಕ್ಸರ್ ಬಾರಿಸಿದ ಸಾಧನೆ ಮಾಡಿತ್ತು.