ಅಹಮದಾಬಾದ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿಯನ್ನು ಭಾರತ ತನ್ನಲ್ಲೇ ಉಳಿಸಿಕೊಂಡರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಉಭಯ ತಂಡಗಳ ಈ ಪಂದ್ಯ ಗುರುವಾರ(ಮಾರ್ಚ್ 9) ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಪ್ರಧಾನಿ ಮೋದಿ(Narendra Modi) ಮತ್ತು ಆಸೀಸ್ ಪ್ರಧಾನಿ ಆಂಟೋನಿ ಅಲ್ಬನೀಸ್(Anthony Albanese) ಸಾಕ್ಷಿಯಾಗಲಿದ್ದಾರೆ.
ಇಂದೋರ್ನ ಸ್ಪಿನ್ ಟ್ರ್ಯಾಕ್ನಲ್ಲಿಯೂ ಭಾರತವನ್ನು 9 ವಿಕೆಟ್ಗಳ ಅಂತರದಿಂದ ಬಗ್ಗು ಬಡಿದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಸ್ಟ್ರೇಲಿಯಾ ಈ ಪಂದ್ಯದಲ್ಲಿಯೂ ಹಿಡಿತ ಸಾಧಿಸುವ ವಿಶ್ವಾಸದಲ್ಲಿದೆ. ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ ಸ್ಟೀವನ್ ಸ್ಮಿತ್ ತಮ್ಮ ತಂತ್ರಗಾರಿಕೆಯ ಮೂಲಕ ತಂಡವನ್ನು ಗೆಲುವಿನಿ ಟ್ರ್ಯಾಕ್ಗೆ ತರುವಲ್ಲಿ ಯಶಸ್ಸು ಕಂಡಿದ್ದಾರೆ. ಇದೀಗ ಅಂತಿಮ ಪಂದ್ಯದಲ್ಲಿ ಪಂದ್ಯಕ್ಕೆ ಗೆಲುವು ತಂದು ಕೊಟ್ಟು ಸರಣಿಯನ್ನು 2-2 ಸಮಬಲಕ್ಕೆ ತರುವ ಪಣತೊಟ್ಟಿದ್ದಾರೆ.
ಇದನ್ನೂ ಓದಿ IND VS AUS: ರವಿಶಾಸ್ತ್ರಿ ಹೇಳಿಕೆಗೆ ಅಸಂಬದ್ಧ ಎಂದು ತಿರುಗೇಟು ನೀಡಿದ ರೋಹಿತ್ ಶರ್ಮಾ
ಕೆ.ಎಲ್. ರಾಹುಲ್ ಬದಲಿಗೆ ಶುಭಮನ್ ಗಿಲ್ ಅವರಿಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲು ಅವಕಾಶ ನೀಡಿದರೂ ಭಾರತದ ಓಪನಿಂಗ್ ಸಮಸ್ಯೆ ಬಹೆಯರಿಯಲಿಲ್ಲ. ಅವರು ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಜತೆಗೆ ನಾಯಕ ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದ ಆಟಗಾರರಾದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಕೂಡ ಇದುವರೆಗೆ ದೊಡ್ಡ ಇನಿಂಗ್ಸ್ ಆಡಿಲ್ಲ. ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇವರೆಲ್ಲ ಈ ಪಂದ್ಯದಲ್ಲಾದರು ಉತ್ತಮ ಪ್ರದರ್ಶನ ತೋರಲೇ ಬೇಕಿದೆ.