ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯ(IND VS AUS) ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತ 400ರನ್ ಗಳಿಸಿ ಆಲೌಟ್ ಆಗಿದೆ. ಇದರೊಂದಿಗೆ 223 ರನ್ ಗಳ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದ್ದ ಭಾರತ ಮೂರನೇ ದಿನದಾಟದಲ್ಲಿ 79 ರನ್ ಒಟ್ಟುಗೂಡಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. 66 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರವೀಂದ್ರ ಜಡೇಜಾ ಮೂರನೇ ದಿನದಾಟದಲ್ಲಿ 13 ರನ್ ಬಾರಿಸಿ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು. ಜಡೇಜಾ ಅವರ ಒಟ್ಟು ಮೊತ್ತ 70ರನ್.
ಜಡೇಜಾ ವಿಕೆಟ್ ಪತನದ ಬಳಿಕ ಬಿರುಸಿನ ಆಟವಾಡಿದ ಅಕ್ಷರ್ ಪಟೇಲ್ ಆಸೀಸ್ ಬೌಲರ್ಗಳ ಮೇಲೆರಗಿ ಬೌಂಡರಿ ಸಿಕ್ಸರ್ ಬಾರಿಸ ತೊಡಗಿದರು. ಅವರ ಆಟವನ್ನು ಗಮನಿಸುವಾಗ ಒಂದು ಹಂತದಲ್ಲಿ ಶತಕ ಬಾರಿಸುವ ಎಲ್ಲ ಲಕ್ಷಣಗಳು ಗೋಚರವಾಗಿತ್ತು. ಆದರೆ 84 ರನ್ ಗಳಿಸಿದ್ದ ವೇಳೆ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಈ ವಿಕೆಟ್ ಪತನದೊಂದಿಗೆ ಭಾರತದ ಮೊದಲ ಇನಿಂಗ್ಸ್ ಕೂಡ ಕೊನೆಗೊಂಡಿತು.
ಮೊಹಮ್ಮದ್ ಶಮಿ 37 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಈ ಇನಿಂಗ್ಸ್ ವೇಳೆ ಅವರು 3 ಸಿಕ್ಸರ್, 2 ಬೌಂಡರಿ ಬಾರಿಸಿ ಗಮನ ಸೆಳೆದರು. ಆಸ್ಟ್ರೇಲಿಯಾ ಪರ ಟಾಡ್ ಮರ್ಫಿ ಮೊದಲ ಇನಿಂಗ್ಸ್ನಲ್ಲಿ ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು.