ರಾಜ್ಕೋಟ್: ಅಂತಿಮ ಏಕದಿನ(IND vs AUS) ಪಂದ್ಯದಲ್ಲಿ ಮೈ ಚಳಿ ಬಿಟ್ಟು ಆಡಿದ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ಪೇರಿಸಿ ಭಾರತಕ್ಕೆ ಸವಾಲೊಡ್ಡಿದೆ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ನಾಲ್ಕು ಮಂದಿ ಅರ್ಧಶತಕ ಬಾರಿಸಿದ್ದು ಈ ಪಂದ್ಯದ ಹೈಲೆಟ್ಸ್ ಆಗಿತ್ತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್(56), ಮಿಚೆಲ್ ಮಾರ್ಷ್(96), ಸ್ಟೀವನ್ ಸ್ಮಿತ್(74) ಮತ್ತು ಮಾರ್ನಸ್ ಲಬುಶೇನ್(72) ಅರ್ಧಶತಕ ಬಾರಿಸಿದ ಆಟಗಾರರು.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಆರಂಭದಿಂದಲೇ ಭಾರತದ ಬೌಲರ್ಗಳ ಮೇಲೆರಗಿ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 352 ರನ್ ಬಾರಿಸಿತು. ಭಾರತ ಗೆಲುವಿಗೆ 353 ರನ್ ಗಳಿಸಬೇಕಿದೆ.
ಬುಮ್ರಾ ಬೆಂಡೆತ್ತಿದ ವಾರ್ನರ್-ಮಾರ್ಷ್
ಮೊದಲ ಪಂದ್ಯದಲ್ಲಿ ಕೇವಲ 4 ರನ್ಗೆ ಔಟಾಗಿ ದ್ವಿತೀಯ ಪಂದ್ಯಿಂದ ಹೊರಗುಳಿದಿದ್ದ ಆರಂಭಕಾರ ಮಿಚೆಲ್ ಮಾರ್ಷ್ ಈ ಪಂದ್ಯದಲ್ಲಿ ಸಂಪೂರ್ಣ ಜೋಶ್ನಿಂದಲೇ ಬ್ಯಾಟಿಂಗ್ ನಡೆಸಿದರು. ತಮ್ಮ ಜತೆಗಾರ ಡೇವಿಡ್ ವಾರ್ನರ್ ಜತೆ ಸೇರಿಕೊಂಡು ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅವರನ್ನು ಬೆಂಡೆತ್ತಿದ್ದರು. ಬುಮ್ರಾ ಅವರ ಪ್ರತಿ ಓವರ್ಗೆ 10ರ ಸರಾಸರಿಯಲ್ಲಿ ರನ್ ಗಳಿಸಿದರು. ಬುಮ್ರಾ 5 ಓವರ್ ಪೂರ್ತಿಗೊಳಿಸುವ ವೇಳೆ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಅಬ್ಬರದ ಬ್ಯಾಟಿಂಗ್ಗೆ ಕನ್ನಡಿಗ ಪ್ರಸಿದ್ಧ್ ಕೃಷ್ಟ ಕೊನೆಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ವಾರ್ನರ್ ಅವರ ವಿಕೆಟ್ ಕಿತ್ತು ಭಾರತಕ್ಕೆ ಅರ್ಲಿ ಬ್ರೇಕ್ ಒದಗಿಸಿದರು. 34 ಎಸೆತಗಳಲ್ಲಿ 56 ರನ್ಗಳಿಸಿದ ವಾರ್ನರ್ ಕೆ.ಎಲ್ ರಾಹುಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಅವರ ಈ ಅರ್ಧಶತಕದ ಇನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು. ಮಾರ್ಷ್ ಮತ್ತು ವಾರ್ನರ್ ಸೇರಿಕೊಂಡು ಮೊದಲ ವಿಕೆಟ್ಗೆ 78 ರನ್ ರಾಶಿ ಹಾಕಿದರು.
ದ್ವಿತೀಯ ವಿಕೆಟ್ಗೆ ಶತಕದ ಜತೆಯಾಟ
ವಾರ್ನರ್ ವಿಕೆಟ್ ಬಿದ್ದರೂ ಆಸೀಸ್ ರನ್ ಗಳಿಕೆಯ ವೇಗ ಮಾತ್ರ ಕಡಿಮೆಯಾಗಲಿಲ್ಲ. ದ್ವಿತೀಯ ವಿಕೆಟ್ಗೆ ಆಡಲಿಳಿದ ಸ್ಟೀವನ್ ಸ್ಮಿತ್ ಕೂಡ ಮಾರ್ಷ್ ಜತೆ ಸೇರಿಕೊಂಡು ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಇವರ ಬ್ಯಾಟಿಂಗ್ ವೇಗಕ್ಕೆ 27 ಓವರ್ಗೆ ಆಸೀಸ್ 200 ರನ್ಗಳ ಗಡಿ ದಾಟಿತು. ಈ ವೇಳೆ ಆಸೀಸ್ 400 ರನ್ ಬಾರಿಸುವ ನಿರೀಕ್ಷೆಯೊಂದನ್ನು ಮಾಡಲಾಯಿತು. ಆದರೆ ಕುಲ್ದೀಪ್ ಡೇಂಜರಸ್ ಬ್ಯಾಟರ್ ಮಿಚೆಲ್ ಮಾರ್ಷ್ ಅವರ ವಿಕೆಟ್ ಕಿತ್ತರು. ಇದರ ಬೆನ್ನಿಗೆ ಸ್ಟೀವನ್ ಸ್ಮಿತ್ ವಿಕೆಟ್ ಕೂಡ ಬಿತ್ತು. ಇಲ್ಲಿಂದ ಭಾರತೀಯ ಬೌಲರ್ಗಳು ಹಿಡಿತ ಸಾಧಿಸಿದರು.
ಮಾರ್ಷ್ಗೆ ಕೈತಪ್ಪಿದ ಶತಕ
ಮಿಚೆಲ್ ಮಾರ್ಷ್ 84 ಎಸೆತಗಳಿಂದ 13 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 96 ರನ್ ಬಾರಿಸಿ ಕೇವಲ 4 ರನ್ ಅಂತರದಿಂದ ಶತಕ ವಂಚಿತರಾದರು. ಭಾರತ ಪರ 9 ಇನಿಂಗ್ಸ್ನಲ್ಲಿ ಮಾರ್ಷ್ 458 ರನ್ ಪೂರ್ತಿಗೊಳಿಸಿದರು. ಮಾರ್ಷ್ ವಿಕೆಟ್ ಬಿದ್ದು 27 ರನ್ ಒಟ್ಟುಗೂಡುವಷ್ಟರಲ್ಲಿ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಸ್ಟೀವನ್ ಸ್ಮಿತ್ ಕೂಡ ಔಟಾದರು. ದ್ವಿತೀಯ ವಿಕೆಟ್ಗೆ ಈ ಜೋಡಿ ಬರೋಬ್ಬರಿ 137 ರನ್ ಜತೆಯಾಟ ನಡೆಸಿತು. ಸ್ಮಿತ್ ವಿಕೆಟ್ ಸಿರಾಜ್ ಪಾಲಾಯಿತು. ಸ್ಮಿತ್ 8 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 74 ರನ್ ಗಳಿಸಿದರು.
ಇದನ್ನೂ ಓದಿ ICC World Cup 2023: ಭಾರತಕ್ಕೆ ಹೊರಟ ಪಾಕ್ ತಂಡ; ಖಾಲಿ ಸ್ಟೇಡಿಯಂನಲ್ಲಿ ಪಂದ್ಯ
ಅಂತಿಮ ಹಂತದಲ್ಲಿ ಸಿಡಿದ ಲುಬುಶೇನ್
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಮಾರ್ನಸ್ ಲಬುಶೇನ್ ಈ ಪಂದ್ಯದಲ್ಲಿಯೂ ಅಧರ್ಶತಕ ಬಾರಿಸಿ ಮಿಂಚಿದರು. ಸ್ಮಿತ್ ಮತ್ತು ಮಾರ್ಷ್ ವಿಕೆಟ್ ಬಿದ್ದ ಬಳಿಕ ನಾಟಕೀಯ ಕುಸಿತ ಕಂಡ ಆಸೀಸ್ಗೆ ಆಸರೆಯಾಗಿ ನಿಂತು ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಈ ಪಂದ್ಯದಲ್ಲಿ ಆಡಲಿಳಿದರು. ಆದರೆ ಅವರ ಪ್ರದರ್ಶನ ಮಾತ್ರ ನಿರೀಕ್ಷಿತ ಮಟ್ಟದಿಂದ ಕೂಡಿರಲಿಲ್ಲ. 5 ರನ್ಗೆ ಸೀಮಿತರಾದರು. ಆ ಬಳಿಕ ಬಂದ ಕ್ಯಾಮರೂನ್ ಗ್ರೀನ್(9), ಅಲೆಕ್ಸ್ ಕ್ಯಾರಿ(11) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸುವಲ್ಲಿ ವಿಫಲರಾದರು. ಉಭಯ ಆಟಗಾರರು ಸಿಂಗಲ್ ಡಿಜಿಟ್ಗೆ ಔಟಾದರು.
ಲಬುಶೇನ್ 58 ಎಸೆತ ಎದುರಿಸಿ 72 ರನ್ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಆರಂಭದಲ್ಲಿ ಸರಿಯಾಗಿ ದಂಡಿಸಿಕೊಂಡ ಬುಮ್ರಾ ಅಂತಿಮ ಹಂತದಲ್ಲಿ ಹಿಡಿತ ಸಾಧಿಸಿ 3 ವಿಕೆಟ್ ಕಿತ್ತರು. ಆದರೂ 81 ರನ್ ಬಿಟ್ಟುಕೊಟ್ಟರು. ಕುಲ್ದೀಪ್ ಯಾದವ್ ಮಾತ್ರ ಕಡಿಮೆ ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.