Site icon Vistara News

IND VS AUS: ಅಶ್ವಿನ್​ ಸ್ಪಿನ್​ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ​; ಭಾರತಕ್ಕೆ ಇನಿಂಗ್ಸ್​ ಹಾಗೂ 132 ರನ್​​ ಗೆಲುವು

IND VS AUS 4

#image_title

ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯ(IND VS AUS) ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಇನಿಂಗ್ಸ್​ ಗೆಲುವು ದಾಖಲಿದೆ. ಈ ಮೂಲಕ ಬಾಡರ್ರ್​-ಗವಾಸ್ಕರ್(border gavaskar trophy)​ ಟೆಸ್ಟ್​ ಟ್ರೋಫಿಯ ನಾಲ್ಕು ಪಂದ್ಯಗಳ ಸರಣಯಲ್ಲಿ ರೋಹಿತ್​ ಶರ್ಮಾ ಪಡೆ 1-0 ಮುನ್ನಡೆ ಕಾಯ್ದುಕೊಂಡಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್​ ಅಸೋಸಿಯೇಶನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ಕೇವಲ ಮೂರೇ ದಿನಕ್ಕೆ ಅಂತ್ಯಕಂಡಿತು. ಭಾರತ ಇನಿಂಗ್ಸ್​ ಮತ್ತು 132 ರನ್​ಗಳ ಗೆಲುವು ದಾಖಲಿಸಿ ಮೆರೆದಾಡಿತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 177ಕ್ಕೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ ಭರ್ತಿ 400 ರನ್​ ಗಳಿಸಿ 223 ರನ್​ ಮುನ್ನಡೆ ಗಳಿಸಿತು.

223 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಕೇವಲ 91 ರನ್​ಗೆ ಆಲೌಟ್​ ಆಗುವ ಮೂಲಕ ಹೀನಾಯ ಸೋಲು ಕಂಡಿತು. ದ್ವಿತೀಯ ಇನಿಂಗ್ಸ್​ನಲ್ಲಿ ಆರ್​.ಅಶ್ವಿನ್​ ಘಾತಕ ಸ್ಪಿನ್​ ದಾಳಿ ನಡೆಸಿ ಆಸೀಸ್​ ಬ್ಯಾಟರ್​ಗಳ ಸೊಕ್ಕಡಗಿಸಿದರು. ಅಶ್ವಿನ್​ 5 ವಿಕೆಟ್​ ಕಿತ್ತು ಮಿಂಚಿದ್ದರು. ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್​ ಕಿತ್ತಿದ್ದರು. ಒಟ್ಟಾರೆ ಅವರು 8 ವಿಕೆಟ್​ ಉರುಳಿಸಿದರು. ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದು ಮಿಂಚಿದ್ದ ಜಡೇಜಾ ದ್ವಿತೀಯ ಇನಿಂಗ್ಸ್​ನಲ್ಲಿ 2 ವಿಕೆಟ್​ ಕಿತ್ತರು. ಮೊಹಮ್ಮದ್​ ಶಮಿ 2 ಮತ್ತು ಅಕ್ಷರ್​ ಪಟೇಲ್ ಒಂದು ವಿಕೆಟ್​ ಕಲೆಹಾಕಿದರು.

ಸಂಪೂರ್ಣ ವೈಫಲ್ಯ ಕಂಡ ಆಸೀಸ್​

ದ್ವಿತೀಯ ಇನಿಂಗ್ಸ್​ನಲ್ಲಿ ಆಸೀಸ್​ ದಿಟ್ಟ ಬ್ಯಾಟಿಂಗ್​ ಹೋರಾಟ ನಡೆಸಬಹುದೆಂದು ಊಹಿಸಲಾಗಿತ್ತು. ಆದರೆ ಭೋಜನ ವಿರಾಮದ ಬಳಿಕ ಇನಿಂಗ್ಸ್​ ಆರಂಭಿಸಿದ ಆಸೀಸ್​ ಕೇವಲ 2 ಗಂಟೆಗಳಲ್ಲಿ ಆಲೌಟ್​ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಅಶ್ವಿನ್​ ಮತ್ತು ಜಡೇಜಾ ಅವರ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲರಾದ ಆಸೀಸ್​ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದರು. ಉಪನಾಯಕ ಸ್ಟೀವನ್​ ಸ್ಮಿತ್​ ಏಕಾಂಗಿಯಾಗಿ ಹೋರಾಡಿ 25 ರನ್​ಗಳಿಸಿ ಅಜೇಯ ಉಳಿದರು. ಇವರಿಗೆ ಯಾವ ಬ್ಯಾಟರ್ಗಳು ಸರಿಯಾಗಿ ಬೆಂಬಲ ನೀಡಲಿಲ್ಲ. ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವಾಡನ್ನಾಡಿದ ಟಾಡ್​ ಮರ್ಫಿ 7 ವಿಕೆಟ್​ ಕಿತ್ತು ಮಿಂಚಿದರು.

ಅಕ್ಷರ್, ಶಮಿ ಬೊಂಬಾಟ್​

ಇದಕ್ಕೂ ಮುನ್ನ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದ್ದ ಭಾರತ ಮೂರನೇ ದಿನದಾಟದಲ್ಲಿ 79 ರನ್​ ಒಟ್ಟುಗೂಡಿಸಿ ಒಟ್ಟು 400ರನ್​ಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತು. 66 ರನ್ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ರವೀಂದ್ರ ಜಡೇಜಾ ಮೂರನೇ ದಿನದಾಟದಲ್ಲಿ 13 ರನ್​ ಬಾರಿಸಿ ಟಾಡ್​ ಮರ್ಫಿಗೆ ವಿಕೆಟ್ ಒಪ್ಪಿಸಿದರು. ಜಡೇಜಾ ಅವರ ಒಟ್ಟು ಮೊತ್ತ 70ರನ್​.

ಜಡೇಜಾ ವಿಕೆಟ್​ ಪತನದ ಬಳಿಕ ಬಿರುಸಿನ ಆಟವಾಡಿದ ಅಕ್ಷರ್​ ಪಟೇಲ್ ಮತ್ತು ಮೊಹಮ್ಮದ್​ ಶಮಿ​ ಆಸೀಸ್​ ಬೌಲರ್​ಗಳ ಮೇಲೆರಗಿ ಬೌಂಡರಿ ಸಿಕ್ಸರ್​ ಬಾರಿಸ ತೊಡಗಿದರು. ಅದರಲ್ಲೂ ಶಮಿ ಆಟವನ್ನು ಗಮನಿಸುವಾಗ ಒಂದು ಹಂತದಲ್ಲಿ ಅರ್ಧ ಶತಕ ಬಾರಿಸುವ ಎಲ್ಲ ಲಕ್ಷಣಗಳು ಗೋಚರವಾಗಿತ್ತು. ಆದರೆ 37 ರನ್​ ಗಳಿಸಿ ಮರ್ಫಿಗೆ ವಿಕೆಟ್​ ಒಪ್ಪಿಸಿದರು. ಈ ಇನಿಂಗ್ಸ್​ ವೇಳೆ ಅವರು 3 ಸಿಕ್ಸರ್​, 2 ಬೌಂಡರಿ ಬಾರಿಸಿ ಗಮನ ಸೆಳೆದರು. ಅಕ್ಷರ್​ ಪಟೇಲ್​ 84 ರನ್ ಗಳಿಸಿ ಕಮಿನ್ಸ್​ ಅವರಿಗೆ ವಿಕೆಟ್​ ಒಪ್ಪಿಸಿ ಶತಕ ಬಾರಿಸುವ ಅವಕಾಶವೊಂದನ್ನು ಕಳೆದುಕೊಂಡರು. ಈ ವಿಕೆಟ್​ ಪತನದೊಂದಿಗೆ ಭಾರತದ ಮೊದಲ ಇನಿಂಗ್ಸ್ ಕೂಡ​ ಕೊನೆಗೊಂಡಿತು.

ಸಂಕ್ಷಿಪ್ತ ಸ್ಕೋರ್​

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್​ 177ಕ್ಕೆ ಆಲೌಟ್​(ಲಬುಶೇನ್​ 49, ಅಲೆಕ್ಸ್​ ಕ್ಯಾರಿ 36, ಜಡೇಜಾ 47ಕ್ಕೆ 5, ಅಶ್ವಿನ್​ 42ಕ್ಕೆ 3).

ಭಾರತ: ಮೊದಲ ಇನಿಂಗ್ಸ್​ 400ಕ್ಕೆ ಆಲೌಟ್​(ರೋಹಿತ್​ ಶರ್ಮಾ 120, ಅಕ್ಷರ್​ ಪಟೇಲ್ 84, ಜಡೇಜಾ 70, ಮೊಹಮ್ಮದ್​ ಶಮಿ 37, ಟಾಡ್​ ಮರ್ಫಿ 124ಕ್ಕೆ 7).

ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್​: 91ಕ್ಕೆ ಆಲೌಟ್​( ಸ್ಟೀವನ್​ ಸ್ಮಿತ್​ ಅಜೇಯ 25, ಲಬುಶೇನ್​ 10, ಆರ್​. ಅಶ್ವಿನ್​ 37ಕ್ಕೆ 5, ಜಡೇಜಾ 34ಕ್ಕೆ 2, ಶಮಿ 13ಕ್ಕೆ 2). ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ

Exit mobile version