ಇಂದೋರ್: ಭಾರತ(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ದಿನದಾಟಕ್ಕೆ 4 ವಿಕೆಟ್ಗೆ 156 ರನ್ ಗಳಿಸಿದೆ. ಇದರೊಂದಿಗೆ ಮೊದಲ ಇನಿಂಗ್ಸ್ನಲ್ಲಿ 47 ರನ್ಗಳ ಮುನ್ನಡೆ ಸಾಧಿಸಿ ಈ ಪಂದ್ಯದಲ್ಲಿ ಹಿಡಿತ ಸಾಧಿಸುವ ಸೂಚನೆ ನೀಡಿದೆ.
ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಥಾನ್ ಲಿಯೋನ್(3) ಮತ್ತು ಮ್ಯಾಥ್ಯೂ ಕುಹ್ನೆಮನ್(5) ಅವರ ಸ್ಪಿನ್ ದಾಳಿಗೆ ಸಿಲುಕಿ 33.2 ಓವರ್ಗಳಲ್ಲಿ ಕೇವಲ 109 ರನ್ ಗಳಿಸಿ ಸರ್ವಪತನ ಕಂಡಿತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 12 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಈ ವೇಳೆ ಆಸೀಸ್ ಕೂಡ ಭಾರತದ ಸ್ಥಿತಿಯನ್ನೇ ಕಾಣುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ರಕ್ಷಣಾತ್ಮ ಆಟಕ್ಕೆ ಮುಂದಾದ ಮಾರ್ನಸ್ ಲಬುಶೇನ್(31) ಮತ್ತು ಉಸ್ಮಾನ್ ಖಾವಾಜ (60) ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಈ ಜೋಡಿ ದ್ವಿತೀಯ ವಿಕೆಟ್ಗೆ 96 ರನ್ಗಳ ಜತೆಯಾಟ ನಡೆಸಿತು.
ಲಬುಶೇನ್ ವಿಕೆಟ್ ಪತನದ ಬಳಿಕ ಆಡಲಿಳಿದ ಹಂಗಾಮಿ ನಾಯಕ ಸ್ಟೀವನ್ ಸ್ಮಿತ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದರು. ಆದರೆ ಇವರ ಓಟಕ್ಕೆ ರವೀಂದ್ರ ಜಡೇಜಾ ಬ್ರೇಕ್ ಹಾಕಿದರು. ಸ್ಮಿತ್ 38 ಎಸೆತದಲ್ಲಿ 26 ರನ್ ಗಳಿಸಿದರು. ಸದ್ಯ ಪೀಟರ್ ಹ್ಯಾಂಡ್ಸ್ಕಾಂಬ್(7*) ಮತ್ತು ಕ್ಯಾಮರೂನ್ ಗ್ರೀನ್(6*) ಅಜೇಯ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತು ಮಿಂಚಿದರು. ಆದರೆ ಟೆಸ್ಟ್ನಲ್ಲಿ ನಂ.1 ಸ್ಥಾನಕ್ಕೇರಿದ ಆರ್. ಅಶ್ವಿನ್ ಅವರ ಸ್ಪಿನ್ ಜಾದು ಮೊದಲ ದಿನ ಕಂಡುಬರಲಿಲ್ಲ.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ವಿರಾಟ್ ಕೊಹ್ಲಿ 22 ರನ್ ಗಳಿಸಿ ಭಾರತ ಪರ ಅತ್ಯಧಿಕ ಮೊತ್ತ ಪೇರಿಸಿದ ಆಟಗಾರನಾಗಿ ಗುರುತಿಸಿಕೊಂಡರು. ಅಕ್ಷರ್ ಪಟೇಲ್ 12 ರನ್ ಮಾಡಿ ಅಜೇಯರಾಗಿ ಉಳಿದರು. ಇವರಿಗೆ ಒಬ್ಬ ಆಟಗಾರ ಸಾಥ್ ನೀಡುತ್ತಿದ್ದರೂ ಭಾರತ ಮೊತ್ತ ಕೊಂಚವಾದರೂ ಏರಿಕೆ ಕಾಣುವ ಸಾಧ್ಯತೆ ಇತ್ತು.
ರಾಹುಲ್ ಬದಲಿಗೆ ಆಡಲಿಳಿದ ಶುಭಮನ್ ಗಿಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಳ್ಳುವಲ್ಲಿ ಎಡವಿದರು. ಕೇವಲ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ರಾಹುಲ್ ಬಲಿಗೆ ಗಿಲ್ ಆಡಿದರೂ ಭಾರತದ ಓಪನಿಂಗ್ ಸಮಸ್ಯೆ ಮತ್ತೆ ಮುಂದುವರಿಯಿತು. ನಾಯಕ ರೋಹಿತ್ ಕೂಡ ಜವಾಬ್ದಾರಿಯುತ ಆಟವಾಡುವಲ್ಲಿ ವೈಫಲ್ಯ ಕಂಡರು.
ಇದನ್ನೂ ಓದಿ IND VS AUS: ಆಸೀಸ್ ಸ್ಪಿನ್ ದಾಳಿಗೆ ಕುಸಿದ ಭಾರತ; 109 ರನ್ಗೆ ಆಲೌಟ್
ಆಸೀಸ್ ಬೌಲಿಂಗ್ ಸರದಿಯಲ್ಲಿ ಸ್ಪಿನ್ನರ್ಗಳಾದ ನಥಾನ್ ಲಿಯೋನ್ ಮತ್ತು ಮ್ಯಾಥ್ಯೂ ಕುಹ್ನೆಮನ್ ಭಾರತೀಯ ಆಟಗಾರರನ್ನು ಹೆಡೆಮುರಿ ಕಟ್ಟಿವಲ್ಲಿ ಯಶಸ್ಸು ಕಂಡರು. ಉಭಯ ಆಟಗಾರರು ಸೇರಿ 8 ವಿಕೆಟ್ ಕಿತ್ತರು. ಇದರಲ್ಲಿ ಕುಹ್ನೆಮನ್5 ಮತ್ತು ಲಿಯೋನ್ 3 ವಿಕೆಟ್ ಪಡೆದರು.