ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯ ಗೆದ್ದಿರುವ ಭಾರತ ಈ ಪಂದ್ಯದಲ್ಲಿಯೂ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಅತ್ತ ಸ್ಮಿತ್ ಪಡೆ ಹೇಗಾದರೂ ಮಾಡಿ ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಜೀವಂತವಿರಿಸಬೇಕು ಎಂದು ಪಣ ತೊಟ್ಟಿದೆ. ಹೀಗಾಗಿ ಈ ಮುಖಾಮುಖಿ ಹೈ ವೋಲ್ಟೇಜ್ನಿಂದ ಕೂಡಿರುವ ಸಾಧ್ಯತೆ ಇದೆ.
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ರೋಹಿತ್ ಆಮಗನದಿಂದ ಇಶಾನ್ ಕಿಶನ್ ಜಾಗ ಬಿಡಬೇಕಾಗುತ್ತದೆ.
ರಾಹುಲ್ ಮೇಲೆ ನಿರೀಕ್ಷೆ
ಮುಂಬಯಿಯಲ್ಲಿ ಸಂಕಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಕಳೆದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ತಂಡದಿಂದ ಹೊರಗುಳಿದಿದ್ದ ರಾಹುಲ್ ಏಕದಿನದಲ್ಲಿ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು. ಜತೆಗೆ ಶ್ರೇಷ್ಠಮಟ್ಟದ ಕೀಪಿಂಗ್ ನಡೆಸುವ ಮೂಲಕವೂ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ರಾಹುಲ್ ಅವರು ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಉತ್ತಮ ರೆಕಾರ್ಡ್ ಕೂಡ ಹೊಂದಿದ್ದಾರೆ. 2019ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇದೀಗ ಈ ಪಂದ್ಯದಲ್ಲಿಯೂ ಅವರು ಶತಕ ಸಿಡಿಸಿ ಮಿಂಚಬಹುದೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ ನಡೆಯುವುದು ಅನುಮಾನ; ಕಾರಣ ಏನು?
ಇನ್ನೊಂದೆಡೆ ಈ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತ ತಂಡ ಇಲ್ಲಿ ಇದುವರೆಗೆ 10 ಏಕದಿನ ಪಂದ್ಯವನ್ನಾಡಿದೆ. ಇದರಲ್ಲಿ 7 ಗೆಲುವು, ಒಂದು ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇನ್ನೊಂದು ಪಂದ್ಯ ಟೈ ಆಗಿತ್ತು.