Site icon Vistara News

IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು

umpire kettleborough

ಅಹಮದಾಬಾದ್​: 140 ಕೋಟಿ ಭಾರತೀಯರು ಮಾಡಿದ್ದ ನಿರೀಕ್ಷೆ ಹುಸಿಯಾಗಿದೆ. ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ(IND vs AUS Final) ವಿರುದ್ಧ ಸೋಲು ಕಂಡಿದೆ. ಈ ಸೋಲಿನೊಂದಿಗೆ ಐಸಿಸಿ ಕೂಟಗಳಲ್ಲಿ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನ್ನುವುದು ಮತ್ತೆ ಸಾಬೀತಾಗಿದೆ.

ಹೌದು, ಐಸಿಸಿ ಕೂಟಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಅವರು ಪ್ರತಿ ಬಾರಿಯೂ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದರು. ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿತ್ತು. ಇದೀಗ ಮತ್ತೆ ಈ ಭವಿಷ್ಯ ನಿಜವಾಗಿದೆ. ಭಾರತ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ.

ಫೈನಲ್​ ಪಂದ್ಯಕ್ಕೆ ಅಂಫೈರ್​ಗಳ ಪಟ್ಟಿ ಪ್ರಕಟಗೊಂಡಾಗಲೇ ಎಲ್ಲ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕೂಡ ಈ ಬಾರಿ ಭಾರತಕ್ಕೆ ಸೋಲು ಖಚಿತ ಎಂದೇ ಹೇಳಿದ್ದರು. ಇದು ಕೊನೆಗೂ ನಿಜವಾಗಿದೆ.​ ಲೀಗ್​ನಿಂದ ಸೆಮಿಫೈನಲ್​ ತನಕ ಆಡಿದ ಎಲ್ಲ 11 ಪಂದ್ಯಗಳಲ್ಲಿಯೂ ಭಾರತ ಸಾಧಿಸಿದ ಗೆಲುವು ನೀರಲ್ಲಿ ಹೋಮವಾಗಿದೆ.

ಕೆಟಲ್‌ಬರೋ ಅಂಪೈರಿಂಗ್‌ನಲ್ಲಿ ಭಾರತಕ್ಕೆ ಎದುರಾದ ಸೋಲುಗಳು

2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿತ್ತು. ಇದು ನಿಜವಾಗಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಭರ್ತಿ 50 ಓವರ್​ ಆಡಿ 240 ರನ್​ಗೆ ಆಲೌಟ್​ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿದರೂ ಟ್ರಾವಿಸ್​ ಹೆಡ್​ ಅವರ ಸೊಗಸಾದ ಶತಕದ ನೆರವಿನಿಂದ 43 ಓವರ್​ಗಳಲ್ಲಿ 4 ವಿಕೆಟ್​ಗೆ 241 ರನ್​ ಬಾರಿಸಿ 6ನೇ ಬಾರಿ ವಿಶ್ವಕಪ್​ ಗೆದ್ದು ಮರೆದಾಡಿತು.

ಇದನ್ನೂ ಓದಿ ICC World Cup 2023 : ವಿಶ್ವ ಕಪ್ ಫೈನಲ್​ ಇತಿಹಾಸದಲ್ಲಿ ಕನಿಷ್ಠ ಮೊತ್ತ ರಕ್ಷಿಸಿ ಗೆದ್ದಿತ್ತು ಭಾರತ

2019ರ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​​ ವಿರುದ್ಧ ಧೋನಿ ಸ್ಟ್ರೈಕ್​ನಲ್ಲಿರುವವರೆಗೆ ಭಾರತಕ್ಕೆ ಗೆಲುವ ಖಚಿತ ಎಂದು ಎಲ್ಲ ಭಾರತೀಯರು ನಂಬಿದ್ದರು. ಆದರೆ ಎರಡು ರನ್​ ಓಡುವಾಗ ಮಾರ್ಟಿನ್‌ ಗಪ್ಟಿಲ್‌ ಅವರ ಡೈರೆಕ್ಟ್‌ ಥ್ರೋ ಧೋನಿಯನ್ನು ರನೌಟ್‌ ಮಾಡಿತು. ಅಲ್ಲಿಗೆ ಭಾರತದ ಫೈನಲ್‌ ಕನಸು ಕಮರಿ ಹೋಯಿತು. ಧೋನಿಯ ರನೌಟ್​ ಕಂಡು ಫೀಲ್ಡ್​ ಅಂಪೈರ್​ ಕೆಟಲ್‌ಬರೋ ಕೂಡ ಬೇಸರಗೊಂಡಿದ್ದರು.

Exit mobile version