ಇಂದೋರ್: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದೋರ್ನಲ್ಲಿ ನಡೆಯಲಿದೆ. ಉಭಯ ತಂಡಗಳ ಟೆಸ್ಟ್ ಕಾದಾಟ ಮಾರ್ಚ್ 1ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಇಂದೋರ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಏನೆಲ್ಲ ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ಇಂತಿದೆ.
ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಟೆಸ್ಟ್ನಲ್ಲಿ ದ್ವಿಶಕ ಬಾರಿಸಿ ಮೆರೆದಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ ಅವರು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಇದು ಕೊಹ್ಲಿ ಅವರ ಎರಡನೇ ತವರಿನ ದ್ವಿಶತಕವಾಗಿತ್ತು. ಕೊಹ್ಲಿ ಈ ಪಂದ್ಯದಲ್ಲಿ 211 ರನ್ ಬಾರಿಸಿದ್ದರು. ಒಟ್ಟಾರೆ ಕೊಹ್ಲಿ ಇದುವರೆಗೆ ಟೆಸ್ಟ್ನಲ್ಲಿ 7 ದ್ವಿಶತಕ ಬಾರಿಸಿದ್ದಾರೆ. ಇದೀಗ ಕೊಹ್ಲಿ ಮತ್ತೊಮ್ಮೆ ಇಂದೋರ್ನಲ್ಲಿ ಮಿಂಚಲಿದ್ದಾರಾ ಎಂದು ಕಾದು ನೋಡಬೇಕಿದೆ.
ಕೊಹ್ಲಿಯನ್ನು ಹೊರತು ಪಡಿಸಿ ಇಂದೋರ್ನಲ್ಲಿ ದ್ವಿಶತಕ ಬಾರಿಸಿದ ಮತ್ತೊಬ್ಬ ಟೀಮ್ ಇಂಡಿಯಾ ಆಟಗಾರನೆಂದರೆ ಅದು ಕನ್ನಡಿಗ ಮಯಾಂಕ್ ಅಗರ್ವಾಲ್. 2019ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಬರೋಬ್ಬರಿ 243 ರನ್ ಪೇರಿಸಿ ದ್ವಿಶತಕದ ಸಂಭ್ರಮಾಚರಣೆ ಮಾಡಿದ್ದರು. ಆದರೆ ಈ ಬಾರಿ ಮಯಾಂಕ್ ಅಗರ್ವಾಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಇದನ್ನೂ ಓದಿ IND VS AUS: ರಾಹುಲ್ಗೆ ಉಸಿರಾಡಲು ಬಿಡಿ; ಟೀಕಾಕಾರರಿಗೆ ಇಯಾನ್ ಬಿಷಪ್ ಕಿವಿಮಾತು
ಇಂದೋರ್ನಲ್ಲಿ ಬೌಲಿಂಗ್ ಸಾಧನೆ ನೋಡುವುದಾದರೆ ಆರ್. ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಉತ್ತಮ ದಾಖಲೆ ಹೊಂದಿದ್ದಾರೆ. ಆರ್ ಅಶ್ವಿನ್ ಇಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಒಟ್ಟು 18 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಶಮಿ ಕೂಡ 2 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. ಒಟ್ಟಾರೆ ಭಾರತೀಯ ಆಟಗಾರರು ಇಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.