ವಿಶಾಖಪಟ್ಟಣಂ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
ಆಸ್ಟ್ರೇಲಿಯಾ ಮೊದಲ ಪಂದ್ಯ ಸೋತಿರುವ ಕಾರಣ ಈ ಪಂದ್ಯ ಸ್ಮಿತ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಭಾರತ ಈ ಪಂದ್ಯದಲ್ಲಿಯೂ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿತ್ತು. ಆದರೆ ಈ ಪಂದ್ಯಕ್ಕೆ ಮಳೆ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಶಾಖಪಟ್ಟಣದಲ್ಲಿ ನಡೆಯುವ ಈ ಪಂದ್ಯಕ್ಕೆ ಎರಡೂವರೆ ಮೂರು ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ, ಮಳೆಯ ಜತೆಗೆ ಭಾರಿ ಗಾಳಿಯೂ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IND VS AUS: ಚಿರತೆ ವೇಗದಲ್ಲಿ ಜಿಗಿದು ಕ್ಯಾಚ್ ಪಡೆದ ಕೆ.ಎಲ್. ರಾಹುಲ್; ವಿಡಿಯೊ ವೈರಲ್
ಪತ್ನಿಯ ಸಹೋದರನ ಮದುವೆ ನಿಮಿತ್ತ ಮೊದಲ ಪಂದ್ಯದಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ ಮತ್ತೆ ತಂಡ ಸೇರಿಕೊಂಡಿದ್ದು ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಈ ಪಂದ್ಯ ಇದೀಗ ನಡೆಯುವುದೇ ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಈ ಪಂದ್ಯ ಮಳೆಯಿಂದ ಸ್ಥಗಿತಗೊಂಡರೆ ಸರಣಿ ನಿರ್ಣಾಯಕ ಪಂದ್ಯ ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿದೆ.