ಸೇಂಟ್ ಲೂಸಿಯಾ: ಕಳೆದ ವರ್ಷದ ಏಕದಿನ ವಿಶ್ವಕಪ್(T20 World Cup 2024) ಫೈನಲೀಸ್ಟ್ಗಳಾದ ಭಾರತ ಮತ್ತು ಆಸ್ಟ್ರೇಲಿಯಾ(IND vs AUS) ನಾಳೆ ನಡೆಯುವ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿ ನಿಂತಿದೆ. ಸೆಮಿಫೈನಲ್ ಆಸೆ ಜೀವಂತವಿರಿಸಿಕೊಳ್ಳಬೇಕಿದ್ದರೆ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಗೆಲ್ಲಲೇ ಬೇಕು. ಹೀಗಾಗಿ ಇತ್ತಂಡಗಳ ನಡುವಣ ಈ ಪಂದ್ಯವನ್ನು ಹೈವೋಲ್ಟೇಜ್ ಎಂದು ನಿರೀಕ್ಷೆ ಮಾಡಲಾಗಿದೆ.
ತವರಿನಲ್ಲೇ ಭಾರತಕ್ಕೆ ಸೋಲುಣಿಸಿ ಏಕದಿನ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟಿದ್ದ ಆಸೀಸ್ಗೆ ಇದೀಗ ಭಾರತ ನಾಳಿನ ಪಂದ್ಯದಲ್ಲಿ ಸೋಲಿಸಿ ವಿಶ್ವಕಪ್ ಟೂರ್ನಿಯಿಂದ ಹೊರದಬ್ಬ ಬೇಕು. ಈ ಮೂಲಕ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಬೇಕು. ಭಾರತೀಯ ಅಭಿಮಾನಿಗಳ ಆಶಯವೂ ಕೂಡ ಇದಾಗಿದೆ.
ಆಸ್ಟ್ರೇಲಿಯಾ ತಂಡ ಯಾವುದೇ ಮಹತ್ವದ ಪಂದ್ಯವಿರಲಿ ಇಲ್ಲಿ ಡಿಫರೆಂಟ್ ಗೇಮ್ ಆಡಿ ಗೆದ್ದು ಬರುತ್ತದೆ. ಪಿಚ್ ಎಂತದ್ದೇ ಆಗಿರಲಿ. ಎದುರಾಳಿ ಯಾರೇ ಆಗಿರಲಿ ಅವರನ್ನು ಮಣಿಸಿ ಗೆದ್ದು ಬರುವುದು ಆಸೀಸ್ ತಂಡದ ವಿಶೇಷತೆ. ಟಾಸ್ ಗೆದ್ದರೆ ತಪ್ಪಿಯೂ ಆಸೀಸ್ಗೆ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ನೀಡಬಾರದು. ಬಿರುಸಿನ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಕಲೆ ಹಾಕುವುದು ಆಸೀಸ್ ತಂಡದ ಪ್ರಧಾನ ಗುರಿ. ಈ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿ ಅವರ ಆತ್ಮವಿಶ್ವಾಸ ಕುಗ್ಗಿಸುವುದು ಆಸೀಸ್ ತಂಡದ ತಂತ್ರ. ಹೀಗಾಗಿ ರೋಹಿತ್ ಶರ್ಮ ಟಾಸ್ ಗೆದ್ದರೆ ಯಾವುದೇ ಕಾರಣಕ್ಕೂ ಬೌಲಿಂಗ್ ಆಯ್ದುಕೊಳ್ಳಬಾರದು ಎನ್ನುವುದು ಅಭಿಮಾನಿಗಳ ಸಲಹೆಯಾಗಿದೆ.
ಇದನ್ನೂ ಓದಿ
ಓಪನಿಂಗ್ ಸಮಸ್ಯೆ ಬಗೆಹರಿಯಬೇಕಿದೆ
ಭಾರತದ ಓಪನಿಂಗ್ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸಣ್ಣ ಮಟ್ಟದಲ್ಲಿ ಕ್ಲಿಕ್ ಆದರೂ ಕೂಡ ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೆ ಇದು ಸಾಲದು. ಹೀಗಾಗಿ ಕೊಹ್ಲಿ ಮತ್ತು ರೋಹಿತ್ ಈ ಪಂದ್ಯದಲ್ಲಿ ರಕ್ಷಣಾತ್ಮ ಆಟಕ್ಕೆ ಒತ್ತು ನೀಡುವ ಬದಲು ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ ಪವರ್ ಪ್ಲೇಯಲ್ಲಿ ದೊಡ್ಡ ಮೊತ್ತ ಪೇರಿಸಬೇಕು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ನಿರೀಕ್ಷಿತ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಪಂತ್ ಮತ್ತು ಸೂರ್ಯಕುಮಾರ್ ಅವಸರ ಮಾಡದೆ ಆಡಬೇಕಿದೆ. ಬೌಲಿಂಗ್ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಬುಮ್ರಾ, ಕುಲ್ದೀಪ್, ಅರ್ಶದೀಪ್ ಉತ್ತಮ ಲಯದಲ್ಲಿದ್ದಾರೆ.
ಇದನ್ನೂ ಓದಿ IND vs AUS Super 8: ಆಸೀಸ್ ವಿರುದ್ಧ ಭಾರತಕ್ಕೆ ಸೋಲು ಖಚಿತ ಎಂದ ಅಭಿಮಾನಿಗಳು; ಕಾರಣವೇನು?
ಆಸ್ಟ್ರೇಲಿಯಾ ತಂಡಕ್ಕೆ ತಲೆನೋವು ಉಂಟುಮಾಡುತ್ತಿರುವುದು ನಾಯಕ ಮಿಚೆಲ್ ಮಾರ್ಷ್ ಅವರ ಸತತ ಬ್ಯಾಟಿಂಗ್ ವೈಫಲ್ಯ. ಇದುವರೆಗೂ ಅವರು ನಿರೀಕ್ಷತ ಬ್ಯಾಟಿಂಗ್ ಪ್ರದರ್ಶನ ತೋರಿಲ್ಲ. ಹೆಸರಿಗೆ ಮಾತ್ರ ನಾಯಕನಂತೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತೀಯ ಬೌಲರ್ಗಳ ಪ್ರಧಾನ ಟಾರ್ಗೆಟ್ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಆಗಿರಬೇಕು. ಉಭಯ ಆಟಗಾರರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಬೇರೂರದಂತೆ ನೋಡಿಕೊಳ್ಳಬೇಕು.
ಬಲಾಬಲ
ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 3 ಪಂದ್ಯ ಗೆದ್ದರೆ, ಆಸೀಸ್ 2 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಕಳೆದ 2 ಬಾರಿಯ ಮುಖಾಮುಖಿಯಲ್ಲಿಯೂ ಭಾರತವೇ ಗೆದ್ದು ಬೀಗಿದೆ. ಹೀಗಾಗಿ ಭಾರತ ಬಲಿಷ್ಠ ಎನ್ನಬಹುದು. ಒಟ್ಟಾರೆಯಾಗಿ ಟಿ20 ಕ್ರಿಕೆಟ್ನಲ್ಲಿ ಇತ್ತಂಡಗಳು 31 ಪಂದ್ಯಗಳಲ್ಲಿ ಆಡಿವೆ. ಇದರಲ್ಲಿ ಭಾರತ 19 ಪಂದ್ಯ ಮತ್ತು ಆಸ್ಟ್ರೇಲಿಯ 17 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.