ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 9 ವಿಕೆಟ್ ಅಂತರದ ಸೋಲು ಕಾಣುವ ಜತೆಗೆ ಕೆಟ್ಟ ದಾಖಲೆಯೊಂದನ್ನು ಬರೆದಿದೆ. ಕಳೆದ 10 ವರ್ಷಗಳಲ್ಲಿ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಎದುರಾದ ಮೂರನೇ ಸೋಲು ಇದಾಗಿದೆ.
ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಇನಿಂಗ್ಸ್ನಲ್ಲಿ 109ರನ್ ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸೀಸ್ 197 ರನ್ಗೆ ಸರ್ವಪತನ ಕಂಡರೂ 88 ರನ್ಗಳ ಮುನ್ನಡೆ ಸಾಧಿಸಿತು.
88 ರನ್ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ನಥನ್ ಲಿಯಾನ್ ಅವರ ಮಾರಕ ಸ್ಪಿನ್ ಸುಳಿಯಲ್ಲಿ ಒದ್ದಾಡಿ ಕೇವಲ 163 ರನ್ನಿಗೆ ಆಟ ಮುಗಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 76 ರನ್ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ ಮೂರನೇ ದಿನದಾಟದಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 78 ರನ್ ಬಾರಿಸಿ ಗೆಲುವು ದಾಖಲಿಸಿತು.
ಇದನ್ನೂ ಓದಿ IND VS AUS: ಮೂರನೇ ಟೆಸ್ಟ್; 9 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದ ಆಸೀಸ್
ಭಾರತ ಈ ಸೋಲಿನೊಂದಿಗೆ ಕಳೆದ 10 ವರ್ಷಗಳಲ್ಲಿ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಸೋಲು ಕಂಡ ಅವಮಾನಕ್ಕೆ ಸಿಲುಕಿತು. ಇದಕ್ಕೂ ಮುನ್ನ ಭಾರತ 2021ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 227 ರನ್ನುಗಳ ಸೋಲು ಕಂಡಿತ್ತು. 2017ರಲ್ಲಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 333 ರನ್ನುಗಳ ಭಾರಿ ಅಂತರದಿಂದ ಸೋಲು ಕಂಡಿತ್ತು. ಇದೀಗ ಮೂರನೇ ಸೋಲು ಆಸೀಸ್ ವಿರುದ್ಧವೇ ದಾಖಲಾಗಿದೆ. ಒಟ್ಟಾರೆ 10 ವರ್ಷಗಳಲ್ಲಿ ಭಾರತ ತವರಿನಲ್ಲಿ ಸೋತ ಸಂಖ್ಯೆ ಮೂರಕ್ಕೇರಿದೆ.