ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ(IND VS AUS) ಬಾರ್ಡರ್ ಗವಾಸ್ಕರ್ ಟ್ರೋಫಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಬಳಗ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದರ ಜತೆಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿಯನ್ನು ಭಾರತ ತನ್ನಲ್ಲೇ ಉಳಿಸಿಕೊಂಡಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಟೆಸ್ಟ್ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯ ಕಂಡಿತು. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯವೂ ಮೂರೇ ದಿನಕ್ಕೆ ಅಂತ್ಯ ಕಂಡಿತ್ತು. ದ್ವಿತೀಯ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 263 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 262 ರನ್ಗಳಿಗೆ ಆಲೌಟ್ ಆಗುವ ಮೂಲಕ ಒಂದು ರನ್ ಹಿನ್ನಡೆ ಅನುಭವಿಸಿತು.
ಒಂದು ರನ್ ಮುನ್ನಡೆ ಸಾಧಿಸಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಶನಿವಾರ(ಫೆ.18) ಎರಡನೇ ದಿನದಾಟದ ಅಂತ್ಯಕ್ಕೆ 12 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿ 62 ರನ್ಗಳ ಮುನ್ನಡೆ ಪಡೆದುಕೊಂಡು ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಭಾನುವಾರ(ಫೆ.19) ಮೂರನೇ ದಿನದಾಟ ಮುಂದುವರಿಸಿದ ಆಸೀಸ್ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಅರ್ಧ ದಾರಿ ಕ್ರಮಿಸುವ ವೇಳೆ ಹಠಾತ್ ಕುಸಿತ ಕಂಡು 133 ರನ್ಗೆ ಆಲೌಟ್ ಆಯಿತು. 115 ರನ್ಗಳ ಗೆಲುವಿನ ಗುರಿ ಪಡೆದ ಭಾರತ 4 ವಿಕೆಟ್ ಕಳೆದುಕೊಂಡು 118 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆಸ್ಟ್ರೇಲಿಯಾ ನೀಡಿದ 115ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೂ ಆರಂಭಿಕ ಆಘಾತ ಎದುರಾಗಿದ್ದು. 1 ರನ್ ಗಳಿಸಿ ಕೆ.ಎಲ್ ರಾಹುಲ್ ವಿಕೆಟ್ ಒಪ್ಟಿಸಿ ಆತಂಕ ಸೃಷ್ಟಿಸಿದರು. ಆದರೆ ನಾಯಕ ರೋಹಿತ್ ಶರ್ಮಾ(31) ಮತ್ತು 100 ಟೆಸ್ಟ್ ಪಂದ್ಯವನ್ನಾಡಿದ ಚೇತೇಶ್ವರ ಪೂಜಾರ ಅಜೇಯ 31 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ IND VS AUS: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ
ಮೂರನೇ ದಿನದಾಟದಲ್ಲಿ ಆಸೀಸ್ ಕೇವಲ 52 ರನ್ಗಳಷ್ಟೆ ಒಟ್ಟುಗೂಡಿಸಿತು. ರವಿಂದ್ರ ಜಡೇಜಾ ಬೌಲಿಂಗ್ ಜಾದೂ ಮಾಡುವ ಮೂಲಕ ಆಸೀಸ್ ಬ್ಯಾಟರ್ಗಳ ಹೆಡೆಮುರಿ ಕಟ್ಟಿದರು. ಅವರು ಕೇವಲ 42 ರನ್ಗೆ 7 ವಿಕೆಟ್ ಕಿತ್ತು ಮಿಂಚಿದರು. ಆರ್ ಅಶ್ವಿನ್ ಮೂರು ಕಿಕೆಟ್ ಕೆಡವಿದರು. ಆಸೀಸ್ ಪರ ಟ್ರಾವಿಸ್ ಹೆಡ್(43), ಮಾರ್ನಸ್ ಲಬುಶೇನ್(35) ಹೊರತು ಪಡಿಸಿ ಉಳಿದ ಯಾವ ಆಟಗಾರರು ಎರಡಂಕ್ಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಾಣಲಿಲ್ಲ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 263, ದ್ವಿತೀಯ ಇನಿಂಗ್ಸ್ 113. ಭಾರತ: ಮೊದಲ ಇನಿಂಗ್ಸ್ 262, ದ್ವಿತೀಯ ಇನಿಂಗ್ಸ್ 4 ವಿಕೆಟ್ಗೆ 118.