ಮುಂಬಯಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರು ಟೀಮ್ ಇಂಡಿಯಾದ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.
ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್ಗೆ ಏಕದಿನ ಸರಣಿಯಲ್ಲಿಯೂ ಅವಕಾಶ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಇದರಿಂದ ರಾಹುಲ್ ಅಭಿಮಾನಿಗಳು ಕೂಡ ಬೇಸರಗೊಂಡಿದ್ದರು. ಆದರೆ ಇದೀಗ ಬಿಸಿಸಿಐ ಅಧಿಕಾರಿಯೊಬ್ಬರು ಏಕದಿನ ಸರಣಿಯಲ್ಲಿ ರಾಹುಲ್ಗೆ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್ ಸದ್ಯಕ್ಕೆ ತಂಡಕ್ಕೆ ಮರಳುವ ಯಾವುದೇ ಸೂಚನೆ ಇಲ್ಲ. ಅವರ ಚೇತರಿಕೆಗೆ ಕನಿಷ್ಠ 2 ವರ್ಷಗಳ ಕಾಲಾವಕಾಶ ಬೇಕು ಎಂದು ಈಗಾಗಲೇ ವೈದ್ಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಓರ್ವ ಸಮರ್ಥ ಕೀಪರ್ ಅಗತ್ಯವಿದೆ. ಜತೆಗೆ ಇದೇ ವರ್ಷ ಏಕದಿನ ವಿಶ್ವ ಕಪ್ ಕೂಡ ನಡೆಯಲಿದೆ. ಈ ಎಲ್ಲ ಕಾರಣದಿಂದ ರಾಹುಲ್ಗೆ ಈ ಸರಣಿಯಿಂದಲೇ ಕೀಪಿಂಗ್ ಹೊಣೆ ನೀಡಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸುವ ಯೋಜನೆ ನಮ್ಮ ಮುಂದಿದೆ ಎಂದು ಹೆಸರು ಹೇಳಬಯಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ IND VS AUS: ಏಕದಿನ ಸರಣಿಗೂ ಸ್ಟೀವನ್ ಸ್ಮಿತ್ ನಾಯಕ; ಆಸೀಸ್ ಕೋಚ್
ಬಿಸಿಸಿಐ ಅಧಿಕಾರಿ ನೀಡಿರುವ ಈ ಮಾಹಿತಿಯಿಂದ ಕೆ.ಎಲ್. ರಾಹುಲ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಆದರೆ ರಾಹುಲ್ ಈ ಸರಣಿಯಲ್ಲಿ ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ಒಂದೊಮ್ಮೆ ರಾಹುಲ್ ಇಲ್ಲಿಯೂ ಎಡವಿದರೆ ಅವರ ಬದಲು ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ಮುಂದಿನ ಸರಣಿಗಳಲ್ಲಿ ಟೀಮ್ ಇಂಡಿಯಾ ಪರ ಕಾಣಿಸಿಕೊಂಡರು ಅಚ್ಚರಿಯಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಶುಕ್ರವಾರ (ಮಾರ್ಚ್ 17) ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.