ಚೆನ್ನೈ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ಕುಲ್ದೀಪ್ ಯಾದವ್(Kuldeep Yadav) ಅವರ ಸಂಘಟಿತ ಬೌಲಿಂಗ್ ದಾಳಿಗೆ ರನ್ ಗಳಿಸಲು ತಿಣುಕಾಡಿದ ಆಸ್ಟ್ರೇಲಿಯಾ(IND VS AUS) ತಂಡ 269 ರನ್ ಗಳಿಸಿ ಸವಾಲೊಡ್ಡಿದೆ. ಭಾರತ ತಂಡ ಗೆಲುವಿಗೆ 270 ರನ್ ಬಾರಿಸಬೇಕಿದೆ.
ಚೆನ್ನೈಯ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ 49 ಓವರ್ಗಳಲ್ಲಿ 269 ರನ್ಗೆ ಸರ್ವಪತನ ಕಂಡಿತು.
ಹೈದರಾಬಾದ್ನಲ್ಲಿ ಸ್ಫೊಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಈ ಪಂದ್ಯದಲ್ಲಿಯೂ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಮೊದಮ್ಮದ್ ಶಮಿ ಅವರಿಗೆ ಪ್ರತಿ ಓವರ್ನಲ್ಲಿಯೂ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ದೊಡ್ಡ ಮೊತ್ತದ ಜತೆಯಾಟ ನಡೆಸುವ ಸೂಚನೆ ನೀಡಿದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಿದ್ದ ಇವರ ಜತೆಯಾಟಕ್ಕೆ ಉಪನಾಯಕ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಿದರು. ಟ್ರಾವಿಸ್ ಹೆಟ್ ವಿಕೆಟ್ ಕಿತ್ತು ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. 30 ರನ್ ಗಳಿಸಿದ ವೇಳೆ ಹೆಡ್ ಅವರ ಸುಲಭದ ಕ್ಯಾಚೊಂದನ್ನು ಶುಭಮನ್ ಗಿಲ್ ಕೈಚೆಲ್ಲಿದರು. ಆದರೆ ಇದೇ ಓವರ್ನಲ್ಲಿ ಪಾಂಡ್ಯ ಅವರು ಹೆಡ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಹೆಡ್ 33 ರನ್ ಗಳಿಸಿದರು. ಈ ವಿಕೆಟ್ ಪತನದ ಬೆನ್ನಲ್ಲೇ ನಾಯಕ ಸ್ಟೀವನ್ ಸ್ಮಿತ್ಗೂ ಖಾತೆ ತೆರೆಯುವ ಮುನ್ನವೇ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತ ಪಾಂಡ್ಯ ಆಸೀಸ್ಗೆ ಅವಳಿ ಆಘಾತವಿಕ್ಕಿದರು.
ವಿಶೇಷವೆಂದರೆ ಆರಂಭಿಕ ಆಟಗಾರನಾಗಿರುವ ಡೇವಿಡ್ ವಾರ್ನರ್ ಅವರು ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದರು. ನಿಧಾನಗತಿಯ ಆಟಕ್ಕೆ ಒತ್ತು ನೀಡಿದ ವಾರ್ನರ್ ಅವರು ಮಾರ್ಷ್ ಜತೆ ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟುವ ಯೋಜನೆಯಲ್ಲಿದ್ದರು. ಆದರೆ ಪಾಂಡ್ಯ ಮತ್ತೆ ಕಾಡಿದರು. ಮಾರ್ಷ್ ವಿಕೆಟ್ ಕಿತ್ತು ಈ ಯೋಜನೆಗೆ ತಣ್ಣಿರೇರಚಿದರು. ಮಾರ್ಷ್ 47 ರನ್ಗೆ ಔಟಾಗುವ ಮೂಲಕ ಕೇವಲ 3 ರನ್ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಆರಂಭಿಕ ಮೂರೂ ವಿಕೆಟ್ ಕೂಡ ಪಾಂಡ್ಯ ಪಾಲಾಯಿತು. ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ ಅವರು ವಾರ್ನರ್ ವಿಕೆಟ್ ಕೂಡ ಬೇಟೆಯಾಡಿದರು. ವಾರ್ನರ್ 31 ಎಸೆತದಿಂದ 21 ರನ್ ಬಾರಿಸಿಸರು. ಇದರಲ್ಲಿ ಕೇವಲ ಒಂದು ಬೌಂಡರಿ ಮಾತ್ರ ದಾಖಲಾಯಿತು. ಆಸ್ಟ್ರೇಲಿಯಾ 138ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ IND VS AUS: ಅಭಿಮಾನಿಗೆ ಸುಂದರ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ; ವಿಡಿಯೊ ವೈರಲ್
ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಮಾರ್ನಸ್ ಲಬುಶೇನ್(28), ಅಲೆಕ್ಸ್ ಕೇರಿ(38) ಮತ್ತು ಮಾರ್ಕಸ್ ಸ್ಟೋಯಿನಿಸ್(25) ಸಣ್ಣ ಮೊತ್ತಮ ಹೋರಾಟ ನಡೆಸಿ ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸೀನ್ ಅಬೋಟ್(26) ಅವರ ಸಾಹಸದಿಂದ ತಂಡ 250ರ ಗಡಿ ದಾಟಿತು. ಹಾರ್ದಿಕ್ ಪಾಂಡ್ಯ 8 ಓವರ್ ನಡೆಸಿ 44 ರನ್ ವೆಚ್ಚದಲ್ಲಿ 3 ವಿಕೆಟ್ ಉಡಾಯಿಸಿದರು. ಕುಲ್ದೀಪ್ ಯಾದವ್ 56ಕ್ಕೆ 3 ವಿಕೆಟ್ ಕಿತ್ತರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು. ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಲೆಹಾಕಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 49 ಓವರ್ಗಳಲ್ಲಿ 269ಕ್ಕೆ ಆಲೌಟ್ (ಟ್ರಾವಿಸ್ ಹೆಡ್ 33, ಮಿಚೆಲ್ ಮಾರ್ಷ್ 47, ಅಲೆಕ್ಸ್ ಕೇರಿ 38, ಮಾರ್ನಸ್ ಲಬುಶೇನ್ 28, ಡೇವಿಡ್ ವಾರ್ನರ್ 23, ಹಾರ್ದಿಕ್ ಪಾಂಡ್ಯ 44ಕ್ಕೆ 3, ಕುಲ್ದೀಪ್ ಯಾದವ್ 56ಕ್ಕೆ 3, ಅಕ್ಷರ್ ಪಟೇಲ್ 57ಕ್ಕೆ 2)