ನವದೆಹಲಿ: ನೂರನೇ ಟೆಸ್ಟ್(IND VS AUS) ಪಂದ್ಯವನ್ನಾಡುವ ಹೊಸ್ತಿಲಲ್ಲಿ ನಿಂತಿರುವ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ(cheteshwar pujara) ಅವರು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಪೂಜಾರ ಮಂಗಳವಾರ ಮೋದಿ ಅವರನ್ನು ಭೇಟಿಯಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ವಿರುದ್ಧ ಫೆ. 17ರಿಂದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯ ಪೂಜಾರ ಅವರಿಗೆ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ಕೆಲವೇ ಆಟಗಾರರು 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಪೂಜಾರ ಈ ಪಟ್ಟಿಗೆ ಸೇರುವ ಮುಂದಿನ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಐತಿಹಾಸಿಕ ಸಾಧನೆ ಮಾಡುವ ಮುನ್ನ ಪೂಜಾರ ಅವರು ಪ್ರಧಾನಿ ಮೋದಿ ಅವರಿಂದ ಶುಭ ಹಾರೈಕೆಯನ್ನು ಸ್ವೀಕರಿಸಿದ್ದಾರೆ.
ಮೋದಿ ಅವರನ್ನು ಭೇಟಿಯಾದ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಚೇತೇಶ್ವರ ಪೂಜಾರ “ಈ ಕ್ಷಣಗಳು ನನ್ನ ಉತ್ಸಾಹವನ್ನು ಹೆಚ್ಚಿಸಲಿವೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ನನಗೆ ಗೌರವದ ಸಂಗತಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರೀ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪೂಜಾರ ಅವರನ್ನು ಭೇಟಿಯಾಗುವುದು ಆಹ್ಲಾದಕರ ಭಾವನೆ. ಅವರ 100ನೇ ಟೆಸ್ಟ್ ಮತ್ತು ವೃತ್ತಿಜೀವನಕ್ಕೆ ನಾನು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.