ಚೆನ್ನೈ: ಪ್ರವಾಸಿ ಭಾರತದ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 21 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯೊಂದಿಗೆ ಸರಣಿ ಗೆಲುವು ದಾಖಲಿಸಿದೆ. ಆಸೀಸ್ ಈ ಸರಣಿ ಗೆಲುವಿನ ಮೂಲಕ ಇದೇ ವರ್ಷ ಭಾರತದಲ್ಲೇ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಗೆ ತಾನೆಷ್ಟು ಬಲಿಷ್ಠ ಎಂಬ ಸ್ಪಷ್ಟ ಸಂದೇಶವೊಂದನ್ನು ಇತರ ತಂಡದ ಜತೆಗೆ ಆತಿಥೇಯ ಟೀಮ್ ಇಂಡಿಯಾಕ್ಕೂ ನೀಡಿದೆ.
ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 49 ಓವರ್ಗಳಲ್ಲಿ 269 ರನ್ಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು 49.1 ಓವರ್ಗಳಲ್ಲಿ 248 ರನ್ಗೆ ಸರ್ವಪತನ ಕಾಣುವ ಮೂಲಕ ಸೋಲು ಕಂಡಿತು. ಆಸೀಸ್ ಈ ಗೆಲುವಿನ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡಿತು.
ಚೇಸಿಂಗ್ ವೇಳೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭದಿಂದಲೇ ಆಸೀಸ್ ಬೌಲರ್ಗಳ ಮೇಲೆರಗಿ ಉತ್ತಮ ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 63 ರನ್ ಜತೆಯಾಟ ನಡೆಸಿತು. ರೋಹಿತ್ ಕೇವಲ 17 ಎಸೆತದಲ್ಲಿ 30 ರನ್ ಗಳಿಸಿ ಸೀನ್ ಅಬೋಟ್ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪತನದ ಬೆನ್ನಲ್ಲೇ ಶುಭಮನ್ ಗಿಲ್ ಕೂಡ ಪತನಗೊಂಡಿತು. ಗಿಲ್ 37 ರನ್ ಬಾರಿಸಿದರು.
ಕೊಹ್ಲಿ ಅರ್ಧಶತಕ ವ್ಯರ್ಥ
ರೋಹಿತ್ ವಿಕೆಟ್ ಪತನದ ಬಳಿಕ ಆಡಲಿಳಿದ ವಿರಾಟ್ ಕೊಹ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಕೆ.ಎಲ್.ರಾಹುಲ್ ಜತೆಗೂಡಿ ಉತ್ತಮ ಇನಿಂಗ್ಸ್ ಕಟ್ಟಿದರು. ಇದೇ ವೇಳೆ ಅರ್ಧಶತಕ ಬಾರಿಸಿ ಮಿಂಚಿದರು. ಆದರೆ ಅಕ್ಷರ್ ಪಟೇಲ್ ಅವರನ್ನು ರನೌಟ್ ಬಲೆಗೆ ಬೀಳಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಕೊಹ್ಲಿ 54 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಮತ್ತು ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಬಹುದೆಂದು ನಿರೀಕ್ಷೆ ಇರಿಸಲಾಗಿತ್ತು. ಉತ್ತಮ ಸ್ಥಿತಿಯಲ್ಲಿದ್ದ ಭಾರತ ಹಠಾತ್ ನಾಟಕೀಯ ಕುಸಿತ ಕಂಡು ಸೋಲಿಗೆ ತುತ್ತಾಯಿತು.
ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿಯೂ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಈ ಮೂಲಕ ಮೂರು ಪಂದ್ಯಗಳಲ್ಲಿಯೂ ಶೂನ್ಯ ಸುತ್ತಿದ ಅವಮಾನಕ್ಕೆ ಒಳಗಾದರು. ಅವರ ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಆಸೀಸ್ ಪರ ಸ್ಪಿನ್ನರ್ ಆ್ಯಡಂ ಜಾಂಪಾ 45 ರನ್ಗೆ 4 ವಿಕೆಟ್ ಕಿತ್ತು ಮಿಂಚಿದರು.
ಉತ್ತಮ ಜತೆಯಾಟ ನಡೆಸಿದ ಮಿಚೆಲ್ ಮಾರ್ಷ್-ಟ್ರಾವಿಸ್ ಹೆಡ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಹೈದರಾಬಾದ್ನಲ್ಲಿ ಸ್ಫೊಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಈ ಪಂದ್ಯದಲ್ಲಿಯೂ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಮೊದಮ್ಮದ್ ಶಮಿ ಅವರಿಗೆ ಪ್ರತಿ ಓವರ್ನಲ್ಲಿಯೂ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ದೊಡ್ಡ ಮೊತ್ತದ ಜತೆಯಾಟ ನಡೆಸುವ ಸೂಚನೆ ನೀಡಿದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಿದ್ದ ಇವರ ಜತೆಯಾಟಕ್ಕೆ ಉಪನಾಯಕ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಿದರು. ಟ್ರಾವಿಸ್ ಹೆಟ್ ವಿಕೆಟ್ ಕಿತ್ತು ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. 30 ರನ್ ಗಳಿಸಿದ ವೇಳೆ ಹೆಡ್ ಅವರ ಸುಲಭದ ಕ್ಯಾಚೊಂದನ್ನು ಶುಭಮನ್ ಗಿಲ್ ಕೈಚೆಲ್ಲಿದರು. ಆದರೆ ಇದೇ ಓವರ್ನಲ್ಲಿ ಪಾಂಡ್ಯ ಅವರು ಹೆಡ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಹೆಡ್ 33 ರನ್ ಗಳಿಸಿದರು. ಈ ವಿಕೆಟ್ ಪತನದ ಬೆನ್ನಲ್ಲೇ ನಾಯಕ ಸ್ಟೀವನ್ ಸ್ಮಿತ್ಗೂ ಖಾತೆ ತೆರೆಯುವ ಮುನ್ನವೇ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತ ಪಾಂಡ್ಯ ಆಸೀಸ್ಗೆ ಅವಳಿ ಆಘಾತವಿಕ್ಕಿದರು.
ವಿಶೇಷವೆಂದರೆ ಆರಂಭಿಕ ಆಟಗಾರನಾಗಿರುವ ಡೇವಿಡ್ ವಾರ್ನರ್ ಅವರು ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದರು. ನಿಧಾನಗತಿಯ ಆಟಕ್ಕೆ ಒತ್ತು ನೀಡಿದ ವಾರ್ನರ್ ಅವರು ಮಾರ್ಷ್ ಜತೆ ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟುವ ಯೋಜನೆಯಲ್ಲಿದ್ದರು. ಆದರೆ ಪಾಂಡ್ಯ ಮತ್ತೆ ಕಾಡಿದರು. ಮಾರ್ಷ್ ವಿಕೆಟ್ ಕಿತ್ತು ಈ ಯೋಜನೆಗೆ ತಣ್ಣಿರೇರಚಿದರು. ಮಾರ್ಷ್ 47 ರನ್ಗೆ ಔಟಾಗುವ ಮೂಲಕ ಕೇವಲ 3 ರನ್ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಆರಂಭಿಕ ಮೂರೂ ವಿಕೆಟ್ ಕೂಡ ಪಾಂಡ್ಯ ಪಾಲಾಯಿತು. ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ ಅವರು ವಾರ್ನರ್ ವಿಕೆಟ್ ಕೂಡ ಬೇಟೆಯಾಡಿದರು. ವಾರ್ನರ್ 31 ಎಸೆತದಿಂದ 21 ರನ್ ಬಾರಿಸಿಸರು. ಇದರಲ್ಲಿ ಕೇವಲ ಒಂದು ಬೌಂಡರಿ ಮಾತ್ರ ದಾಖಲಾಯಿತು. ಆಸ್ಟ್ರೇಲಿಯಾ 138ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ IND VS AUS: ಮೈದಾನದಲ್ಲಿ ರೋಹಿತ್ ಶರ್ಮಾ ಅತಿರೇಕದ ವರ್ತನೆ; ವಿಡಿಯೊ ವೈರಲ್
ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಮಾರ್ನಸ್ ಲಬುಶೇನ್(28), ಅಲೆಕ್ಸ್ ಕೇರಿ(38) ಮತ್ತು ಮಾರ್ಕಸ್ ಸ್ಟೋಯಿನಿಸ್(25) ಸಣ್ಣ ಮೊತ್ತಮ ಹೋರಾಟ ನಡೆಸಿ ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸೀನ್ ಅಬೋಟ್(26) ಅವರ ಸಾಹಸದಿಂದ ತಂಡ 250ರ ಗಡಿ ದಾಟಿತು. ಹಾರ್ದಿಕ್ ಪಾಂಡ್ಯ 8 ಓವರ್ ನಡೆಸಿ 44 ರನ್ ವೆಚ್ಚದಲ್ಲಿ 3 ವಿಕೆಟ್ ಉಡಾಯಿಸಿದರು. ಕುಲ್ದೀಪ್ ಯಾದವ್ 56ಕ್ಕೆ 3 ವಿಕೆಟ್ ಕಿತ್ತರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು. ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಲೆಹಾಕಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 49 ಓವರ್ಗಳಲ್ಲಿ 269ಕ್ಕೆ ಆಲೌಟ್ (ಟ್ರಾವಿಸ್ ಹೆಡ್ 33, ಮಿಚೆಲ್ ಮಾರ್ಷ್ 47, ಅಲೆಕ್ಸ್ ಕೇರಿ 38, ಮಾರ್ನಸ್ ಲಬುಶೇನ್ 28, ಡೇವಿಡ್ ವಾರ್ನರ್ 23, ಹಾರ್ದಿಕ್ ಪಾಂಡ್ಯ 44ಕ್ಕೆ 3, ಕುಲ್ದೀಪ್ ಯಾದವ್ 56ಕ್ಕೆ 3, ಅಕ್ಷರ್ ಪಟೇಲ್ 57ಕ್ಕೆ 2).
ಭಾರತ: 49.1 ಓವರ್ಗಳಲ್ಲಿ 248ಕ್ಕೆ ಆಲೌಟ್( ವಿರಾಟ್ ಕೊಹ್ಲಿ 54, ರೋಹಿತ್ ಶರ್ಮಾ 30, ಹಾರ್ದಿಕ್ ಪಾಂಡ್ಯ 40, ಆ್ಯಡಂ ಜಂಪಾ 45ಕ್ಕೆ4)