ನವದೆಹಲಿ: ಮೊಹಮ್ಮದ್ ಶಮಿ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ(IND VS AUS) ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 263 ರನ್ಗೆ ಆಲೌಟಾಗಿದೆ. ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ(ಫೆ.17) ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆಸೀಸ್ ಉತ್ತಮ ಆರಂಭ ಪಡೆಯಿತು. ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ತಾಳ್ಮೆಯುತ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಿದ್ದರು. ಆದರೆ ವಾರ್ನರ್ ಅವರು 15 ರನ್ ಗಳಿಸಿದ ವೇಳೆ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಟಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 50 ರನ್ ಕಲೆಹಾಕಿತು.
ಡೇವಿಡ್ ವಾರ್ನರ್ ವಿಕೆಟ್ ಪತನದ ಬಳಿಕ ಆಡಲಿಳಿದ ಮಾರ್ನಸ್ ಲಬುಶೇನ್ ಕೇವಲ 18 ರನ್ಗೆ ಔಟಾದರು ಇದರ ಬೆನ್ನಲ್ಲೇ ಸ್ಟೀವನ್ ಸ್ಮಿತ್ ಶೂನ್ಯಕ್ಕೆ ಔಟಾದರು. ಆದರೆ ತಂಡಕ್ಕೆ ಆಸರೆಯಾದ ಖವಾಜಾ 125 ಎಸೆತದಲ್ಲಿ 12 ಬೌಂಡರಿ ಸಹಿತ 81 ರನ್ ಗಳಿಸಿ ಜಡೇಜಾ ಎಸೆತದಲ್ಲಿ ರಾಹುಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಇದನ್ನೂ ಓದಿ IND VS AUS: ಚಿರತೆ ವೇಗದಲ್ಲಿ ಜಿಗಿದು ಅದ್ಭುತ ಕ್ಯಾಚ್ ಹಿಡಿದ ಕೆ. ಎಲ್. ರಾಹುಲ್; ವಿಡಿಯೊ ವೈರಲ್
ಖವಾಜಾ ಔಟಾದ ಬಳಿಕ ಪೀಟರ್ ಹ್ಯಾಂಡ್ಸ್ ಕಾಂಬ್ ತಂಡಕ್ಕೆ ನೆರವಾಗಿ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಅಜೇಯ 72 ರನ್ ಮಾಡಿದರು. ಉಳಿದಂತೆ ನಾಯಕ ಕಮಿನ್ಸ್ 33 ರನ್ ಕಾಣಿಕೆ ನೀಡಿದರು. ಭಾರತದ ಪರ ವೇಗಿ ಶಮಿ ನಾಲ್ಕು ವಿಕೆಟ್ ಕಿತ್ತರೆ, ಅಶ್ವಿನ್ ಮತ್ತು ಜಡೇಜಾ ತಲಾ ಮೂರು ವಿಕೆಟ್ ಉರುಳಿಸಿದರು.