ಚೆನ್ನೈ: ಆಸ್ಟ್ರೇಲಿಯಾ(IND VS AUS) ವಿರುದ್ಧ ಆಡಿದ ಎರಡು ಏಕದಿನ ಪಂದ್ಯದಲ್ಲಿಯೂ ಶೂನ್ಯ ಸುತ್ತಿದ ಸೂರ್ಯಕುಮಾರ್ ಯಾದವ್((Suryakumar Yadav)) ಅವರನ್ನು ಅಂತಿಮ ಏಕದಿನ ಪಂದ್ಯದಿಂದ ಕೈ ಬಿಡಲಾಗುವುದು ಎಂದು ತಿಳಿದುಬಂದಿದೆ. ಭಾರತ ಮತ್ತು ಆಸೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯ ಬುಧವಾರ(ಮಾರ್ಚ್ 22) ಚೆನ್ನೈಯಲ್ಲಿ ನಡೆಯಲಿದೆ.
ಟ್ವಿ 20 ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಸೂರ್ಯಕುಮಾರ್ ಯಾದವ್ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇನ್ನೂ ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ. ಎರಡೂ ಪಂದ್ಯಗಳಲ್ಲಿಯೂ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಇದೀಗ ಸರಣಿ ನಿರ್ಣಾಯಕ ಪಂದ್ಯದಲ್ಲಿ ಅವರನ್ನು ಆಡಿಸುವುದು ಅನುಮಾನ ಎನ್ನಲಾಗಿದೆ.
ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬದಲು ಇಶಾನ್ ಕಿಶನ್(Ishan Kishan) ಆಡುವ ಬಳಗದಲ್ಲಿ ಕಾಣಿಸಿಕೊಳ್ಳವುದು ಬಹುತೇಕ ಖಚಿತ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಸ್ಪಿನ್ನರ್ ಕುಲ್ದೀಪ್ ಯಾದವ್(Kuldeep Yadav) ಬದಲು ಯಜುವೇಂದ್ರ ಚಹಲ್(Yuzvendra Chahal) ಆಡುವ ಸಾಧ್ಯತೆ ಇದೆ. ಕುಲ್ದೀಪ್ ಕಳೆದ ಎರಡು ಪಂದ್ಯಗಳಲ್ಲಿ ವಿಕೆಟ್ ಕೀಳಲು ವಿಫಲವಾಗುವ ಜತೆಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದ್ದರು.
ಭಾರತ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದೊಮ್ಮೆ ಭಾರತ ಈ ಪಂದ್ಯದಲ್ಲಿ ಸೋತರೆ ಸರಣಿಯ ಜತೆಗೆ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಳೆದುಕೊಳ್ಳಲಿದೆ. ಹೀಹಾಗಿ ಭಾರತಕ್ಕೆ ಈ ಪಂದ್ಯ ಎರಡು ಕಾರಣಗಳಿಂದ ಮಹತ್ವದಾಗಿದೆ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಭಾರತ ಸಂಭಾವ್ಯ ತಂಡ
ಶುಭಮನ್ ಗಿಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.