Site icon Vistara News

IND vs AUS T20: ಜೋಶ್​ ಇಂಗ್ಲಿಸ್ ಶತಕ; ಭಾರತ ಗೆಲುವಿಗೆ ಬೃಹತ್​ ಮೊತ್ತದ ಗುರಿ

Josh Inglis

ವಿಶಾಖಪಟ್ಟಣ: ಭಾರತ ವಿರುದ್ಧದ ಮೊದಲ ಟಿ20(IND vs AUS T20) ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಜೋಶ್​ ಇಂಗ್ಲಿಸ್(110)​ ಶತಕ ಬಾರಿಸಿ ಮಿಂಚಿದ್ದಾರೆ. ಇವರ ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ 208 ರನ್​ ಗಳಿಸಿ ಭಾರತಕ್ಕೆ ಸವಾಲೊಡ್ಡಿದೆ. ಭಾರತ ಗೆಲುವಿಗೆ 209 ರನ್​ ಬಾರಿಸಬೇಕಿದೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ ನಿಗದಿತ 20 ಓವರ್​ಗಳಲ್ಲಿ ​ ಮೂರು ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿದೆ.

ಜೋಶ್​ನಿಂದ ಬ್ಯಾಟಿಂಗ್​ ನಡೆಸಿದ ಜೋಶ್​ ಇಂಗ್ಲಿಸ್​

ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ಜೋಶ್​ ಇಂಗ್ಲಿಸ್​ ಫುಲ್​ ಜೋಶ್​ನಿಂದಲೇ ಬ್ಯಾಟಿಂಗ್​ ನಡೆಸಿ ಭಾರತೀಯ ಬೌಲರ್​ಗಳ ಎಸೆತಗಳನ್ನು ದಿಕ್ಕಾಪಾಲಾಗಿಸಿದರು. ಕನ್ನಡಿಗ ಪ್ರಸಿದ್ಧ್​ ಕೃಷ್ಣ ಅವರಂತು ಸರಿಯಾಗಿಯೇ ದಂಡಿಸಿಕೊಂಡರು. ಓವರ್​ಗೆ ಕನಿಷ್ಠ 4 ಬೌಂಡರಿ ಮತ್ತು ಒಂದೆರಡು ಸಿಕ್ಸರ್​ ಹೊಡೆಸಿಕೊಂಡರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಸ್ಟೀವನ್​ ಸ್ಮಿತ್​ ಮತ್ತು ಜೋಶ್​ ಇಂಗ್ಲಿಸ್ ಕಡಿಮೆ ಎಸೆತಗಳಿಂದ ಅರ್ಧಶತಕ ಪೂರೈಸಿದರು.

ಅನುಭವಿ ಆಟಗಾರರ ಅನುಪಸ್ಥಿತಿ ಈ ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು. ಯಂಗ್​ ಟೀಮ್​ ಇಂಡಿಯಾ ಆಟಗಾರರು ಹಲವು ಫೀಲ್ಡಿಂಗ್​ ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡರು, ಕ್ಯಾಚ್​ ಮತ್ತು ಸುಲಭದ ರನೌಟ್​ ಅವಕಾಶವನ್ನು ಕೈಚೆಲ್ಲಿದರು. ಇದರಿಂದ ಜೀವದಾನ ಪಡೆದ ಇಂಗ್ಲಿಸ್​ ಶತಕ ಬಾರಿಸಿ ಆಸೀಸ್​ ಬೃಹತ್​ ಮೊತ್ತಕ್ಕೆ ಕಾರಣವಾದರು.

ದ್ವಿತೀಯ ವಿಕೆಟ್​ಗೆ ಸ್ಮಿತ್​ ಮತ್ತು ಇಂಗ್ಲಿಸ್​ ಸೇರಿಕೊಂಡು 130ರನ್​ ಜತೆಯಾಟ ನಡೆಸಿದರು. ಅರ್ಧಶತಕ ಬಾರಿಸಿದ ಬಳಿಕ ಸ್ಮಿತ್​ ಅವರು ರನೌಟ್​ ಆದರು. ಆದರೆ ಇಂಗ್ಲಿಸ್​ ಮಾತ್ರ ತಮ್ಮ ಬ್ಯಾಟಿಂಗ್​ ಪರಾಕ್ರಮವನ್ನು ಮುಂದುವರಿಸಿ ಭಾರತೀಯ ಬೌಲರ್​ಗಳಿಗೆ ಕಾಡಿದರು. ಕೇವಲ 47 ಎಸೆತಗಳಿಂದ ಶತಕ ಪೂರ್ತಿಗೊಳಿಸಿದರು.

ರವಿ ಬಿಷ್ಣೊಯಿ ಅವರು ನಾಲ್ಕು ಓವರ್​ ಎಸೆದು 54 ರನ್​ ಬಿಟ್ಟುಕೊಟ್ಟು ಒಂದು ವಿಕೆಟ್​ ಪಡೆದರು. ಗಾಯಗೊಂಡು ವಿಶ್ವಕಪ್​ ಟೂರ್ನಿಯಿಂದ ಅಂತಿಮ ಕ್ಷಣದಲ್ಲಿ ಹೊರಬಿದಿದ್ದ ಅಕ್ಷರ್​ ಪಟೇಲ್​ ಅವರು 32 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್ ಎನಿಸಿಕೊಂಡರು. ಆರಂಭಿಕ ಮೂರು ಓವರ್​ಗಳಲ್ಲಿ 43 ರನ್​ ಬಿಟ್ಟುಕೊಟ್ಟ ಪ್ರಸಿದ್ಧ್​ ಕೃಷ್ಣ ತಮ್ಮ ಅಂತಿಮ ಓವರ್​ನಲ್ಲಿ ಡೇಂಜಸರ್​ ಇಂಗ್ಲಿಸ್​ ಅವರ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಸ್ಲೋ ಬಾಲ್​ಗೆ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಎಡವಿದ ಇಂಗ್ಲಿಸ್ ಬೌಂಡರಿ ಲೈನ್​ನಲ್ಲಿ ಯಶಸ್ವಿ ಜೈಸ್ವಾಲ್​ಗೆ ಕ್ಯಾಚ್​ ನೀಡಿದರು.

ಇದನ್ನೂ ಓದಿ ‘ಸೋಲಿನ ನೋವು ಇನ್ನೂ ಕಾಡುತ್ತಿದೆ’; ಭಾವನಾತ್ಮಕ ಪೋಸ್ಟ್​ ಮಾಡಿದ ರಾಹುಲ್​

50 ಎಸೆತ ಎದುರಿಸಿದ ಇಂಗ್ಲಿಸ್​ ಸೊಗಸಾದ 8 ಸಿಕ್ಸರ್​ ಮತ್ತು 11 ಬೌಂಡರಿ ನೆರವಿನಿಂದ 110 ರನ್ ಬಾರಿಸಿದರು. ಸ್ಟೀವನ್​ ಸ್ಮಿತ್​ 41 ಎಸೆತಗಳಿಂದ 8 ಬೌಂಡರಿ ಬಾರಿಸಿ 52 ರನ್​ ಗಳಿಸಿದರು. ಆರಂಭಕಾರ ಮ್ಯಾಥ್ಯೂ ಶಾರ್ಟ್​ 13 ರನ್​ ಗಳಿಸಿದರು. ಅಂತಿಮ ಹಂತದಲ್ಲಿ ಟಿಮ್​ ಡೇವಿಡ್​ ಅಜೇಯ 19 ರನ್​ ಗಳಿಸಿ ತಂಡದ ಮೊತ್ತವನ್ನು 200ಕ್ಕೇರಿಸಿದರು. ಸ್ಟೋಯಿನಿಸ್​ 7 ರನ್​ ಗಳಿಸಿ ಅಜೇಯರಾಗಿ ಉಳಿದರು.

Exit mobile version