Site icon Vistara News

IND VS AUS: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಟೀಮ್‌ ಇಂಡಿಯಾ

IND VS AUS: Team India looking for a hat-trick win

IND VS AUS: Team India looking for a hat-trick win

ಇಂದೋರ್‌: ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈಗಾಗಲೇ ಆಸ್ಟ್ರೇಲಿಯಾವನ್ನು 2 ಪಂದ್ಯಗಳಲ್ಲಿ ಬಗ್ಗು ಬಡಿದಿರುವ ಭಾರತ(IND VS AUS) ಮೂರನೇ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಜತೆಗೆ ಹ್ಯಾಟ್ರಿಕ್‌ ಗೆಲುವಿನ ಸಾಧನೆಯೊಂದಿಗೆ ಐಸಿಸಿ ಟೆಸ್ಟ್‌ ವಿಶ್ವ ಕಪ್‌ ಫೈನಲ್‌ ಟಿಕೆಟ್‌ ಅಧಿಕೃತವಾಗಿ ಖಾತ್ರಿಪಡಿಸುವ ನಿರೀಕ್ಷೆಯಲ್ಲಿದೆ.

ಉಭಯ ತಂಡಗಳ ಈ ಮುಖಾಮುಖಿ ಇಂದೋರ್‌ನ ಹೋಳ್ಕರ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಬುಧವಾರ(ಮಾರ್ಚ್‌ 1) ಆರಂಭವಾಗಲಿದೆ. ಮೊದಲೆರಡು ಪಂದ್ಯಗಳು ಕೇವಲ ಮೂರೇ ದಿನಕ್ಕೆ ಮುಕ್ತಾಯ ಕಂಡಿತ್ತು. ಇದೀಗ ಈ ಪಂದ್ಯ ಎಷ್ಟು ದಿನಗಳ ವರೆಗೆ ಸಾಗಲಿದೆ ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳದ್ದಾಗಿದೆ.

ಆಸ್ಟ್ರೇಲಿಯನ್ನರಿಗೆ ಸ್ಪಿನ್‌ ಚಿಂತೆ

ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ಸ್ಪಿನ್‌ ಎಸೆತಗಳನ್ನು ಎದುರಿಸಲಾಗದೆ ಸೋಲು ಕಂಡಿದ್ದ ಆಸ್ಟ್ರೇಲಿಯಕ್ಕೆ ಇಂದೋರ್‌ನಲ್ಲೂ ಸ್ಪಿನ್‌ ಭೀತಿ ಎದುರಾಗಿದೆ. ಈ ಅಂಗಳದಲ್ಲಿ ಆರ್‌. ಅಶ್ವಿ‌ನ್‌ ಉತ್ತಮ ದಾಖಲೆ ಹೊಂದಿದ್ದಾರೆ. ಆಡಿದ 2 ಟೆಸ್ಟ್‌ಗಳಲ್ಲಿ 18 ವಿಕೆಟ್‌ ಕಿತ್ತು ಮಿಂಚಿದ್ದಾರೆ. ಆದರೆ ಆಸೀಸ್‌ ಹಂಗಾಮಿ ನಾಯಕ ಸ್ಟೀವನ್‌ ಸ್ಮಿತ್‌ ಈ ಪಂದ್ಯದಲ್ಲಿ ಭಾರತದ ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ದ್ವಿತೀಯ ಟೆಸ್ಟ್‌ ಪಂದ್ಯ ಸೋತ ಬಳಿಕ ಆಸೀಸ್‌ ಆಟಗಾರರು ನೇರವಾಗಿ ಇಂದೋರ್‌ಗೆ ಬಾರದೆ ದೆಹಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ 5 ದಿನಗಳ ಸ್ಪಿನ್‌ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತದ ಸ್ಪಿನ್‌ ದಾಳಿಯನ್ನು ಆಸೀಸ್‌ ಆಟಗಾರರು ಸಮರ್ಥವಾಗಿ ಎದುರಿಸುವ ಆತ್ಮ ವಿಶ್ವಾಸದಲ್ಲಿದ್ದಾರೆ.

ರಾಹುಲ್‌ VS ಗಿಲ್‌

ಈಗಾಗಲೇ ಕಳಪೆ ಫಾರ್ಮ್‌ನಿಂದಾಗಿ ಭಾರಿ ಟೀಕೆಗೆ ಒಳಗಾಗಿರುವ ಕೆ.ಎಲ್‌. ರಾಹುಲ್‌ ಸ್ಥಾನ ಅಲುಗಾಡುತ್ತಿದೆ. ಅವರನ್ನು ಉಪನಾಯಕತ್ವದಿಂದಲೂ ಕೆಳಗಿಳಿಸಲಾಗಿದೆ. 47 ಟೆಸ್ಟ್‌ಗಳಲ್ಲಿ 33.44ರ ಸಾಮಾನ್ಯ ಸರಾಸರಿಯನ್ನಷ್ಟೇ ಹೊಂದಿದ್ದಾರೆ. ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ ಗಳಿಸಿದ್ದು 20, 17 ಮತ್ತು ಒಂದು ರನ್‌ ಮಾತ್ರ. ಇವರ ಸ್ಥಾನಕ್ಕೆ ಯುವ ಬ್ಯಾಟರ್‌ ಶುಭಮನ್‌ ಗಿಲ್‌ ಬರಬಹುದು ಎಂಬ ನಿರೀಕ್ಷೆ ದಟ್ಟವಾಗಿದೆ.

ಇದನ್ನೂ ಓದಿ IND VS AUS: ಭಾರತದ ಸವಾಲು ಎದುರಿಸಲು ಸಿದ್ಧ; ಸ್ಟೀವನ್‌ ಸ್ಮಿತ್‌ ವಿಶ್ವಾಸ

ಇಂದೋರ್‌ನ ಹೋಳ್ಕರ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ವಿರಾಟ್‌ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. 2016ರಲ್ಲಿ ವಿರಾಟ್​ ಕೊಹ್ಲಿ ಅವರು ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಇದು ಕೊಹ್ಲಿ ಅವರ ಎರಡನೇ ತವರಿನ ದ್ವಿಶತಕವಾಗಿತ್ತು. ಕೊಹ್ಲಿ ಈ ಪಂದ್ಯದಲ್ಲಿ 211 ರನ್ ಬಾರಿಸಿದ್ದರು. ಒಟ್ಟಾರೆ ಕೊಹ್ಲಿ ಇದುವರೆಗೆ ಟೆಸ್ಟ್​ನಲ್ಲಿ 7 ದ್ವಿಶತಕ ಬಾರಿಸಿದ್ದಾರೆ. ಇದೀಗ ​ಕೊಹ್ಲಿ ಮತ್ತೊಮ್ಮೆ ಇಂದೋರ್​ನಲ್ಲಿ ಮಿಂಚಲಿದ್ದಾರಾ ಎಂದು ಕಾದು ನೋಡಬೇಕಿದೆ.

Exit mobile version