ನಾಗ್ಪುರ: ಗಾಯದಿಂದ ಚೇತರಿಸಿಕೊಂಡು ಬಹುಕಾಲದ ಬಳಿಕ ಆಡಲಿಳಿದ ಆಲ್ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ್ದಾರೆ. ಅವರ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಕೇವಲ 177 ರನ್ಗಳಿಗೆ ಸರ್ವಪತನ ಕಂಡಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಕಂಡಿತು. ತಂಡದ ಮೊತ್ತ 2 ರನ್ ಆಗುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆರಂಭಿಕ ಆಘಾತದ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ಮಾರ್ನಸ್ ಲಬುಶೇನ್(Marnus Labuschagne) ಹಾಗೂ ಸ್ಟೀವನ್ ಸ್ಮಿತ್(Steven Smith) 74 ರನ್ ಜತೆಯಾಟವಾಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗುವ ಮೂಲಕ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದರು. ಆದರೆ ಭೋಜನ ವಿರಾಮದ ಬಳಿಕ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಯಿತು.
ಭೋಜನ ವಿರಾಮಕ್ಕೂ ಮುನ್ನ 47 ರನ್ ಗಳಿಸಿದ್ದ ಲಬುಶೇನ್ ಕೇವಲ 2 ರನ್ ಸೇರಿಸಿದ ವೇಳೆ ಔಟಾದರು. ಇಲ್ಲಿಂದ ಭಾರತದ ಬೌಲರ್ಗಳ ಕೈ ಮೇಲಾಯಿತು. ಅಷ್ಟರ ವರೆಗೆ ಸ್ಪಿನ್ ಒಂದೂ ವಿಕೆಟ್ ಬಿದ್ದಿರಲಿಲ್ಲ. ಆದರೆ ಭೋಜನ ಬಳಿಕ ಅಶ್ವಿನ್ ಮತ್ತು ಜಡೇಜಾ ಆಸೀಸ್ ಬ್ಯಾಟರ್ಗಳ ಮೇಲೆ ಸವಾರಿ ನಡೆಸಿ ವಿಕೆಟ್ ಬೇಟೆಯಾಡಿದರು. ಅದರಲ್ಲೂ ಸ್ವೀವನ್ ಸ್ಮಿತ್ ಅವರನ್ನು ಜಡೇಜಾ ಬೌಲ್ಡ್ ಮಾಡಿದ್ದು ಈ ಪಂದ್ಯದ ಹೈಲೆಟ್ ಆಗಿದೆ. ಬ್ಯಾಟ್ ಮಧ್ಯೆ ಕೂದಲೆಳೆ ಅಂತರದಲ್ಲಿ ಚೆಂಡು ಸಾಗಿ ವಿಕೆಟ್‌ಗೆ ಬಡಿಯಿತು. ಇದನ್ನು ಕಂಡ ಸ್ಮಿತ್ ಒಂದು ಕ್ಷಣ ಅಚ್ಚರಿಗೊಳಗಾದರು.
ಜಡೇಜಾ ಕಳೆದ ವರ್ಷ ಏಷ್ಯಾ ಕಪ್ ವೇಳೆ ಕಾಲಿನ ಗಾಯಕ್ಕೆ ತುತ್ತಾಗಿ ಬಳಿಕ ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದರು. ಸರಿ ಸುಮಾರು 7-8 ತಿಂಗಳ ಬಳಿಕ ಭಾರತ ಪರ ಆಡಿದ ಅವರು ಭರ್ಜರಿ ಕಮ್ಬ್ಯಾಕ್ ಮಾಡಿದರು. 22 ಓವರ್ ಎಸೆದು 8 ಮೇಡನ್ ಸಹಿತ 47 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತರು. ಉಳಿದಂತೆ ಆರ್.ಅಶ್ವಿನ್ 42 ರನ್ಗೆ 3 ವಿಕೆಟ್ ಕಿತ್ತರು.
ಇದನ್ನೂ ಓದಿ Border Gavaskar Trophy: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಇತಿಹಾಸ, ರೋಚಕ ಸಂಗತಿಗಳ ಮಾಹಿತಿ
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 177ಕ್ಕೆ ಆಲೌಟ್(ಲಬುಶೇನ್ 49, ಸ್ಟೀವನ್ ಸ್ಮಿತ್ 37, ಅಲೆಕ್ಸ್ ಕ್ಯಾರಿ 36, ಜಡೇಜಾ 47ಕ್ಕೆ 5, ಆರ್. ಅಶ್ವಿನ್ 42ಕ್ಕೆ 3).