ಇಂದೋರ್: ಸ್ಪಿನ್ ಟ್ರ್ಯಾಕ್ನಲ್ಲಿ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ. ಇಂದೋರ್ನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಭರ್ಜರಿ 9 ವಿಕೆಟ್ಗಳ ಗೆಲುವು ದಾಖಲಿದೆ. ಆಸೀಸ್ ಈ ಗೆಲುವಿನೊಂದಿಗೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅಧಿಕೃತವಾಗಿ ಪ್ರವೇಶ ಪಡೆಯಿತು.
ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಸರಣಿಯ 1-2 ಹಿನ್ನಡೆ ಸಾಧಿಸಿದರೂ, ಸರಣಿ ಸೋಲಿನಿಂದ ಪಾರಾಗಿದೆ. ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 9ರಿಂದ ಅಹಮದಾಬಾದ್ನಲ್ಲಿ ನಡೆಯಲಿದೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಿದೆ.
ಇದನ್ನೂ ಓದಿ IND VS AUS: ಸಿಕ್ಸರ್ ಬಾರಿಸಿ ರವಿ ಶಾಸ್ತ್ರಿ ದಾಖಲೆ ಮುರಿದ ವೇಗಿ ಉಮೇಶ್ ಯಾದವ್
ದ್ವಿತೀಯ ಇನಿಂಗ್ಸ್ನಲ್ಲಿ ಗೆಲುವಿಗೆ 76 ರನ್ ಗುರಿ ಪಡೆದ ಆಸ್ಟ್ರೇಲಿಯಾ ಮೂರನೇ ದಿನದಾಟದ ಮೊದಲ ಅವಧಿಯ ಆಟದಲ್ಲೇ ಒಂದು ವಿಕೆಟ್ನಷ್ಟಕ್ಕೆ 78 ರನ್ ಬಾರಿಸಿ ಗೆಲುವು ದಾಖಲಿಸಿತು. ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಖಾತೆ ತೆರೆಯುವ ಮುನ್ನವೇ ಉಸ್ಮಾನ್ ಖವಾಜಾ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ಈ ವೇಳೆ ಭಾರತ ಸಣ್ಣ ಮೊತ್ತವನ್ನು ಉಳಿಸಿಕೊಳ್ಳುವ ಸೂಚನೆಯೊಂದನ್ನು ನೀಡಿತು. ಆದರೆ ಆಕ್ರಮಣಕಾರಿ ಆಟಕ್ಕೆ ಮುಂದಾದ ಟ್ರಾವಿಸ್ ಹೆಡ್(49*) ಮತ್ತು ಮಾರ್ನಸ್ ಲಬುಶೇನ್(28*) ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಶೇಷವೆಂದರೆ ಸರಣಿಯ 3 ಟೆಸ್ಟ್ ಪಂದ್ಯವೂ ಮೂರೇ ದಿನಕ್ಕೆ ಅಂತ್ಯ ಕಂಡಿತು. ಇದಕ್ಕೂ ಮುನ್ನ ನಡೆದ ಎರಡು ಟೆಸ್ಟ್ ಪಂದ್ಯಗಳು ಮೂರೇ ದಿನಕ್ಕೆ ಅಂತ್ಯ ಕಂಡಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್; 109ಕ್ಕೆ ಆಲೌಟ್, ದ್ವಿತೀಯ ಇನಿಂಗ್ಸ್ ;163ಕ್ಕೆ ಆಲೌಟ್
ಆಸ್ಟ್ರೇಲಿಯಾ; ಮೊದಲ ಇನಿಂಗ್ಸ್; 197ಕ್ಕೆ ಆಲೌಟ್, ದ್ವಿತೀಯ ಇನಿಂಗ್ಸ್; 1 ವಿಕೆಟ್ ನಷ್ಟಕ್ಕೆ 78