ನವದೆಹಲಿ: ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಶಂಕಿತ ಇಬ್ಬರು ಉಗ್ರರನ್ನು ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್ ಸೈಬರ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ(IND vs AUS).
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೆ ಅಡ್ಡಿಯುಂಟು ಮಾಡುವ ಸಂಬಂಧ ಖಲಿಸ್ತಾನಿ ಪರ ಶಂಕಿತ ಉಗ್ರರು ಬೆದರಿಕೆ ಹಾಕಿದ್ದರು. ಈ ಸಂಬಂಧ ಗುಜರಾತ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತ ಆರೋಪಿ, ಸಿಮ್ ಬಾಕ್ಸ್ ಟೆಕ್ನಾಲಜಿಯನ್ನು ಬಳಸಿಕೊಂಡು ಬೆದರಿಕೆ ಕರೆ ಮಾಡಿದ್ದ. ಅಹಮದಾಬಾದ್ ಟೆಸ್ಟ್ ಪಂದ್ಯದ ಆರಂಭದ ದಿನ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪಾಲ್ಗೊಂಡಿದ್ದರು. ಹಾಗಾಗಿ, ಈ ಬೆದರಿಕೆ ಕರೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.
ಅಹಮದಾಬಾದ್ ಪೊಲೀಸರು ಪಂಜಾಬ್, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ಆರೋಪಿಗಳ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ತೀವ್ರ ಶೋಧ ಕಾರ್ಯಾಚಣೆಯ ಬಳಿಕ ಮಧ್ಯ ಪ್ರದೇಶದ ಸತ್ನಾ ಮತ್ತು ರೇವಾ ಜಿಲ್ಲೆಗಳಿಂದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇದೇ ವೇಳೆ, ಬೆದರಿಕೆಯೊಡ್ಡಲು ಪಾಕಿಸ್ತಾನದ ನಕಲಿ ಟ್ವಟರ್ ಹ್ಯಾಂಡಲ್‌ಗಳನ್ನೂ ಬಳಸಲಾಗಿತ್ತು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: PM Modi at Ahmedabad : ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನರೇಂದ್ರ ಮೋದಿ ಹವಾ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಅಭಿಮಾನಿಗಳು
ಕಳೆದ ಗುರುವಾರ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯ ಕೊನೆಯ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆರಂಭವಾಗಿತ್ತು. ಪಂದ್ಯದ ಆರಂಭದ ದಿನದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಅಂಥೋಣಿ ಅಲ್ಬನೀಸ್ ಅವರು ಪಾಲ್ಗೊಂಡಿದ್ದರು. ಬಳಿಕ, ಶುಕ್ರವಾರ ಆಸ್ಟ್ರೇಲಿಯಾ ಪಿಎಂ ಅಲ್ಬನೀಸ್ ಅವರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲೆ ಹೆಚ್ಚುತ್ತಿರುವ ಪ್ರೊ ಖಲಿಸ್ತಾನಿ ದಾಳಿಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ, ಹಿಂದೂ ಸಮುದಾಯದ ರಕ್ಷಣೆಗೆ ಆದ್ಯತೆಯನ್ನು ನೀಡುವ ಭರವಸೆಯನ್ನು ಆಸ್ಟ್ರೇಲಿಯಾ ಪಿಎಂ ನೀಡಿದ್ದಾರೆಂದು ತಿಳಿಸಿದ್ದರು.