ಅಹಮದಾಬಾದ್: ಆಸ್ಟ್ರೇಲಿಯಾ(IND VS AUS) ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ವಿರಾಟ ದರ್ಶನ ತೋರಿದ ವಿರಾಟ್ ಕೊಹ್ಲಿ(Virat Kohli) ಶತಕ ಬಾರಿಸಿ ಮರೆದಾಡಿದ್ದಾರೆ. ಇದೇ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.
ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 28ನೇ ಶತಕವನ್ನು ಪೂರ್ತಿಗೊಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದು ಕೊಹ್ಲಿಯ ಒಟ್ಟು 75ನೇ ಶತಕವಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ 75ಕ್ಕೂ ಅಧಿಕ ಶತಕ ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ ಕೇವಲ ಇಬ್ಬರು ಆಟಗಾರರು ಮಾತ್ರವೇ ಇದ್ದಾರೆ. ಈ ಇಬ್ಬರೂ ಆಟಗಾರರು ಭಾರತ ತಂಡದವರು ಎಂಬುವುದು ವಿಶೇಷ. ಆದರೆ ಈ ಮೈಲಿಗಲ್ಲನ್ನು ಅತ್ಯಂತ ವೇಗವಾಗಿ ದಾಟಿದ ದಾಖಲೆಯನ್ನು ವಿರಾಟ್ ಕೊಹ್ಲಿ ಈಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ಸಚಿನ್ ಅವರ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ IND VS AUS: ವಿರಾಟ್ ಕೊಹ್ಲಿ ಶತಕ ಸಂಭ್ರಮ; ಭಾರತಕ್ಕೆ 91 ರನ್ ಲೀಡ್
ಸಚಿನ್ ತೆಂಡೂಲ್ಕರ್ ಅವರು 75 ಅಂತಾರಾಷ್ಟ್ರೀಯ ಶತಕ ಬಾರಿಸಲು 566 ಇನ್ನಿಂಗ್ಸ್‌ಗಳನ್ನು ಬಳಸಿದ್ದರು. ಆದರೆ ಕೊಹ್ಲಿ ಈ ಸಾಧನೆಯನ್ನು 552 ಇನಿಂಗ್ಸ್ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಅತ್ಯಂತ ವೇಗವಾಗಿ 75 ಅಂತಾರಾಷ್ಟ್ರೀಯ ಶತಕ ಪೂರ್ತಿಗೊಳಿಸಿದ ಆಟಗಾರ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಒಟ್ಟು 100 ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೂ 26 ಶತಕಗಳ ಅಗತ್ಯವಿದೆ.
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 364 ಎಸೆತ ಎದುರಿಸಿ 15 ಬೌಂಡರಿ ನೆರವಿನಿಂದ 186 ರನ್ ಬಾರಿಸಿದರು.