ಅಹಮದಾಬಾದ್: ಪ್ರವಾಸಿ ಆಸ್ಟ್ರೇಲಿಯಾ(IND VS AUS) ಮತ್ತು ಆತಿಥೇಯ ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಅಂತಿಮ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಈ ಮೂಲಕ ರೋಹಿತ್ ಶರ್ಮಾ ಪಡೆ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಪಂದ್ಯದ ಬಳಿಕ ಆಸೀಸ್ ಆಟಗಾರರಿಗೆ ವಿರಾಟ್ ಕೊಹ್ಲಿ(Virat Kohli) ವಿಶೇಷ ಉಡುಗೊರೆ ನೀಡಿ ಗೌರವಿಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಕ್ತಾಯ ಕಂಡ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಆಟಗಾರರಾದ ಉಸ್ಮಾನ್ ಖವಾಜಾ(Usman Khawaja) ಮತ್ತು ಅಲೆಕ್ಸ್ ಕ್ಯಾರಿಗೆ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ IND VS AUS: ಡಬ್ಲ್ಯುಟಿಸಿ ಫೈನಲ್ ಸವಾಲಿನಿಂದ ಕೂಡಿರಲಿದೆ; ರಾಹುಲ್ ದ್ರಾವಿಡ್
ಉಸ್ಮಾನ್ ಖವಾಜಾ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 180 ರನ್ ಬಾರಿಸಿದ್ದರು, ವಿರಾಟ್ ಕೊಹ್ಲಿ 186 ರನ್ ಬಾರಿಸಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 28ನೇ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದ್ದರು. ಉಭಯ ತಂಡಗಳು ಜೂನ್ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕಾದಾಟದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಲಂಡನ್ನ ಓವಲ್ ಮೈದಾನದಲ್ಲಿ ನಡೆಯಲಿದೆ.