ಅಹಮದಾಬಾದ್: ಮೂರು ವರ್ಷಗಳ ಬಳಿಕ ಟೆಸ್ಟ್ನಲ್ಲಿ ಅಮೋಘ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ(Virat Kohli) ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 28ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇವರ ಶತಕದಾಟದ ನೆರವಿನಿಂದ ಭಾರತ 571 ರನ್ ಬಾರಿಸಿದೆ. ಸದ್ಯ ಭಾರತ ಮೊದಲ ಇನಿಂಗ್ಸ್ನಲ್ಲಿ 91 ರನ್ಗಳ ಲೀಡ್ ಪಡೆದಿದೆ.
ಆಸ್ಟ್ರೇಲಿಯಾ(IND VS AUS) ವಿರುದ್ಧ ಅಹಮದಾಬಾದ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ವಿರಾಟ ದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಮೂರನೇ ದಿನಾಟಕ್ಕೆ 59 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕೊಹ್ಲಿ ಭಾನುವಾರ ನಾಲ್ಕನೇ ದಿನದಾಟದಲ್ಲಿ ಶತಕ ಸಿಡಿಸಿ ಮೆರೆದರು. ಇದೇ ಬ್ಯಾಟಿಂಗ್ ಲಯವನ್ನು ಮುಂದುವರಿಸಿದ ಅವರು ದ್ವಿಶತಕ ಬಾರಿಸುವ ಹಾದಿಯಲ್ಲಿ ಎಡವಿ ನಿರಾಸೆ ಅನುಭವಿಸಿದರು. 186 ರನ್ಗೆ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಮ್ಯಾಚ್ ಮೇಲೆ ದಾಳಿಗೆ ಪ್ಯ್ಲಾನ್, ಶಂಕಿತ ಇಬ್ಬರು ಉಗ್ರರ ಬಂಧನ
ಸರಿ ಸುಮಾರು ಒಂದುವರೆ ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅಹಮದಾಬಾದ್ನ ಸುಡು ಬಿಸಿಲನ್ನು ಲೆಕ್ಕಿಸದೆ ಆಸೀಸ್ ಬೌಲರ್ಗಳನ್ನು ಕಾಡಿದರು. ಇವರಿಗೆ ಅಕ್ಷರ್ ಪಟೇಲ್ ಕೂಡ ಉತ್ತಮ ಸಾಥ್ ನೀಡಿದರು. ಅಕ್ಷರ್ ಪಟೇಲ್ ಕೂಡ ಶತಕ ಬಾರಿಸುವ ಸೂಚನೆ ನೀಡಿದ್ದರೂ 79 ರನ್ ಗಳಿಸಿದ ವೇಳೆ ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಇನ್ಸೈಡ್ ಎಡ್ಜ್ ಆಗಿ ವಿಕೆಟ್ ಕಳೆದುಕೊಂಡರು. ಸದ್ಯ ಭಾರತ 91 ರನ್ಗಳ ಲೀಡ್ ಪಡೆದಿದೆ. ವಿರಾಟ್ ಕೊಹ್ಲಿ 364 ಎಸೆತ ಎದುರಿಸಿ 15 ಬೌಂಡರಿ ನೆರವಿನಿಂದ 186 ರನ್ ಬಾರಿಸಿದರು.