ಮುಂಬಯಿ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೆ ರೋಹಿತ್ ಶರ್ಮ(Rohit Sharma) ಗೈರಾದ ಕಾರಣ ಶುಭಮನ್ ಗಿಲ್(shubman gill) ಜತೆ ಭಾರತದ ಇನಿಂಗ್ಸ್ ಯಾರು ಆರಂಭಿಸಲಿದ್ದಾರೆ ಎಂಬ ಕತೂಹಲ ಅಭಿಮಾನಿಗಳಲ್ಲಿ ಉಂಟಾಗಿದೆ.
ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಮುನ್ನಡೆಸಲಿದ್ದಾರೆ. ಆದರೆ ಗಿಲ್ ಜತೆ ಆರಂಭಿಕ ಯಾರು ಎಂಬ ಪ್ರಶ್ನೆಗೆ ಇದುವರೆಗೂ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಗಿಲ್ ಜತೆ ಇಶಾನ್ ಕಿಶನ್(Ishan Kishan) ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ಇಶಾನ್ ಕಿಶನ್ ಅವರು ಗಿಲ್ ಜತೆ ಬ್ಯಾಟಿಂಗ್ ಆರಂಭಿಸಿದರೆ ಆಗ ಕೆ.ಎಲ್ ರಾಹುಲ್ಗೆ(KL Rahul) ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತದೆ. ಆದರೆ ರಾಹುಲ್ ಕೂಡ ಈ ಪಂದ್ಯದಲ್ಲಿ ಅವಕಾಶ ಪಡೆಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ IND VS AUS: ಮುಂಬಯಿ ತಲುಪಿದ ಆಸ್ಟ್ರೇಲಿಯಾ ಆಟಗಾರರು
ಶ್ರೇಯಸ್ ಅಯ್ಯರ್ ಅವರು ಗಾಯದಿಂದ ಈ ಸರಣಿಗೆ ಅಲಭ್ಯರಾಗುವ ಕಾರಣ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಓರ್ವ ಸಮರ್ಥ ಆಟಗಾರನ ಅಗತ್ಯವಿದೆ. ಹೀಗಾಗಿ ರಾಹುಲ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ರಾಹುಲ್ ಕಳೆದ 2019 ಏಕದಿನ ವಿಶ್ವ ಕಪ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು.