ಅಹಮದಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಸೋಲು ಕಾಣುವ ಮೂಲಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(icc test championship) ಫೈನಲ್‌ಗೆ ಲಗ್ಗೆಯಿಟ್ಟಿದೆ. ಆದರೆ ಈ ಫೈನಲ್ ಭಾರತಕ್ಕೆ ಸವಾಲಿನಿಂದ ಕೂಡಿರಲಿದೆ ಎಂದು ಕೋಚ್ ರಾಹುಲ್ ದ್ರಾವಿಡ್(Rahul Dravid) ಹೇಳಿದ್ದಾರೆ.
ಅಹಮದಾಬಾದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡ ಬಳಿಕ ಮಾತನಾಡಿದ ದ್ರಾವಿಡ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆ ಗಳಿಸಿದಕ್ಕೆ ಸಂತಸವಿದೆ. ಆದರೆ ಈ ಪಂದ್ಯ ಭಾರತಕ್ಕೆ ಸವಾಲಿನಿಂದ ಕೂಡಿರಲಿದೆ. ಏಕೆಂದರೆ ಐಪಿಎಲ್ ಮುಗಿದ ಒಂದು ವಾರದೊಳಗೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಆಡಬೇಕಿದೆ ಹೀಗಾಗಿ ಸವಾಲು ಎದುರಾಗಲಿದೆ ಎಂದು ಹೇಳಿದರು.
“ಐಪಿಎಲ್ ಫೈನಲ್ ಪಂದ್ಯ ಡಬ್ಲ್ಯುಟಿಸಿ ಫೈನಲ್‌ಗೆ ಕೇವಲ ಒಂದು ವಾರದ ಮೊದಲು ಇರುವುದರಿಂದ ತಂಡವನ್ನು ತ್ವರಿತ ಗತಿಯಲ್ಲಿ ಸಜ್ಜುಗೊಳಿಸುವ ದೊಡ್ಡ ಸವಾಲು ನಮ್ಮ ಮುಂದಿದೆ. ಸರಿ ಮುಮಾರು 2 ತಿಂಗಳುಗಳ ಕಾಲ ಆಟಗಾರರು ಚುಟುಕು ಕ್ರಿಕೆಟ್ಗೆ ಒಗ್ಗಿಕೊಂಡಿರುತ್ತಾರೆ. ಆದ ಕಾರಣ ಅವರು ತಕ್ಷಣ ದೀರ್ಘ ಸ್ವರೂಪದ ಕ್ರಿಕೆಟ್ಗೆ ಹೊಂದಿಕೊಳ್ಳಲು ಕಷ್ಟಕರವಾಗುವುದು ಸಹಜ. ಹೀಗಾಗಿ ಡಬ್ಲ್ಯುಟಿಸಿ ಫೈನಲ್ ಸವಾಲಿನಿಂದ ಕೂಡಿರುವ ಸಾಧ್ಯತೆ ಇದೆ” ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ. ಕಳೆದ ಬಾರಿ ಭಾರತ ಫೈನಲ್ ಪ್ರವೇಶಿಸಿದ್ದರೂ ನ್ಯೂಜಿಲ್ಯಾಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದೀಗ ಎರಡನೇ ಪ್ರಯತ್ನದಲ್ಲಾದರೂ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಎಂದು ಕಾದು ನೋಡಬೇಕಿದೆ.