ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 188 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದಕೊಂಡಿದೆ.
ಗೆಲುವಿಗೆ 513 ರನ್ನುಗಳ ಕಠಿನ ಗುರಿ ಪಡೆದ ಬಾಂಗ್ಲಾದೇಶ ನಾಲ್ಕನೇ ದಿನದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಅದರಂತೆ 5ನೇ ಹಾಗೂ ಅಂತಿಮ ದಿನದಲ್ಲಿ ಆಡಲಿಳಿದ ಬಾಂಗ್ಲಾ ಕೇವಲ 52 ರನ್ ಒಟ್ಟುಗೂಡಿಸಿದ ವೇಳೆ ಉಳಿದ ನಾಲ್ಕು ವಿಕೆಟ್ ಕೂಡ ಕೈಚೆಲ್ಲಿ ಅಂತಿಮವಾಗಿ 324 ರನ್ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ನಾಲ್ಕನೇ ದಿನವಾದ ಕೊನೇ ಅವಧಿಯಲ್ಲಿ ಆಲ್ರೌಂಡರ್ ಶಕಿಬ್ ಅಲ್ ಹಸನ್ (40*) ಹಾಗೂ ಮೆಹೆದಿ ಹಸನ್ ಮಿರಾಜ್ (9) ತಂಡಕ್ಕೆ ಆಸರೆಯಾಗಿದ್ದರು. ಅದರಂತೆ ಭಾನುವಾರ 5ನೇ ದಿನದ ಆಟ ಮುಂದುವರಿಸಿದ ಈ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ಸಾಧ್ಯವಾಗಲಿಲ್ಲ. ಶಕಿಬ್ 88 ರನ್ ಗಳಿಸಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರೆ, ಮೆಹೆದಿ ಹಸನ್ 13 ರನ್ಗೆ ವಿಕೆಟ್ ಕೈಚೆಲ್ಲಿದರು. ಈ ವಿಕೆಟ್ ಅಕ್ಷರ್ ಪಾಲಾಯಿತು. ಈ ವಿಕೆಟ್ ಪತನದ ಬಳಿಕ ಉಳಿದ ಎರಡು ವಿಕೆಟ್ ಕೂಡ ಬೇಗನೆ ಬಿದ್ದು ಬಾಂಗ್ಲಾ ಸೋಲಿಗೆ ತುತ್ತಾಯಿತು. ಅಂತಿಮ ದಿನದಲ್ಲಿ ಸರಿ ಸುಮಾರು ಅರ್ಧ ತಾಸು ಆಟವಷ್ಟೇ ನಡೆಯಿತು.
ಇದಕ್ಕೂ ಮುನ್ನ ನಾಲ್ಕನೇ ದಿನವಾದ ಶನಿವಾರ ಬಾಂಗ್ಲಾ ಪರ ಆರಂಭಿಕರಾದ ನಜ್ಮುಲ್ ಹೊಸೈನ್ (67) ಹಾಗೂ ಜಾಕಿರ್ ಹಸನ್ (100) ಭಾರತದ ಬೌಲರ್ಗಳನ್ನು ಕಾಡಿದ್ದರು. ಭೋಜನ ವಿರಾಮದ ವೇಳೆಗೆ ಈ ಜೋಡಿ ವಿಕೆಟ್ ನಷ್ಟವಿಲ್ಲದೆ 119 ರನ್ ಗಳಿಸಿ ಭಾರತದ ಪಾಳೆಯದಲ್ಲಿ ಆತಂಕ ಮೂಡಿಸಿತ್ತು. ಆದರೆ, 47ನೇ ಓವರ್ನಲ್ಲಿ ಯಶಸ್ಸು ಸಾಧಿಸಿದ ಉಮೇಶ್ ಯಾದವ್ ನಜ್ಮುಲ್ ವಿಕೆಟ್ ಕಬಳಿಸಿ ಬಾಂಗ್ಲಾಕ್ಕೆ ಬ್ರೇಕ್ ಹಾಕಿದ್ದರು. ಉಳಿದಂತೆ ಲಿಟನ್ ದಾಸ್ (19), ಮುಷ್ಪಿಕರ್ ರಹೀಮ್ (23) ಗಳಿಸಿದರೆ, ನೂರುಲ್ ಹಸನ್ 3 ರನ್ಗೆ ಸೀಮಿತಗೊಂಡಿದ್ದರು.
ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ಪರ ಅಕ್ಷರ್ ಪಟೇಲ್ 4 ಹಾಗೂ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು. ಕೊನೆಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಢಾಕಾದಲ್ಲಿ ಆಯೋಜಿಸಲಾಗಿದೆ.
ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಉರುಳಿಸಿ ಸಾಧನೆ ಮೆರೆದಿದ್ದ ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಜತೆಗೆ ಪ್ರಥಮ ಇನಿಂಗ್ಸ್ ಬ್ಯಾಟಿಂಗ್ ವೇಳೆ ಮಹತ್ವದ 40 ರನ್ ಬಾರಿಸಿದ ಕಾರಣಕ್ಕೆ ಪಂದ್ಯ ಶ್ರೇಷ್ಠ ಗೌರವವನ್ನೂ ತಮ್ಮದಾಗಿಸಿಕೊಂಡರು.
ಸ್ಕೋರ್ ವಿವರ
ಭಾರತ : ಮೊದಲ ಇನಿಂಗ್ಸ್ 404; ಎರಡನೇ ಇನಿಂಗ್ಸ್ 258ಕ್ಕೆ2 ಡಿಕ್ಲೇರ್
ಬಾಂಗ್ಲಾದೇಶ : ಮೊದಲ ಇನಿಂಗ್ಸ್ 150; ಎರಡನೇ ಇನಿಂಗ್ಸ್ 324. (ಜಾಕಿರ್ ಹಸನ್ 100, ಶಕಿಬ್ ಅಲ್ ಹಸನ್ 84, ನಜ್ಮುಲ್ ಹೊಸೈನ್ 67, ಅಕ್ಷರ್ ಪಟೇಲ್ 77ಕ್ಕೆ 4, ಕುಲ್ದೀಪ್ ಯಾದವ್ 73ಕ್ಕೆ 3). ಪಂದ್ಯ ಶ್ರೇಷ್ಠ: ಕುಲ್ದೀಪ್ ಯಾದವ್
ಇದನ್ನೂ ಓದಿ | INDvsAUS W | ಆಸ್ಟ್ರೇಲಿಯಾ ವನಿತೆಯರಿಗೆ ತಲೆಬಾಗಿದ ಭಾರತ ತಂಡ; ಸರಣಿಯಲ್ಲೂ ಸೋಲು