ಢಾಕಾ: ಕೊನೇ ಕ್ಷಣದ ಒತ್ತಡವನ್ನು ನಿಭಾಯಿಸಲು ವಿಫಲಗೊಂಡ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ವೀರೋಚಿತ ಸೋಲಿಗೆ ಒಳಗಾಯಿತು. ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಬ್ಯಾಟರ್ ಮೆಹೆದಿ ಹಸನ್ (೩೮*) ಕೊನೇ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತದ ಗೆಲುವು ಕಸಿದರು. ವಿಕೆಟ್‌ಕೀಪರ್ ಬ್ಯಾಟರ್ ಕೆ. ಎಲ್ ರಾಹುಲ್ ಕೊನೇ ಕ್ಷಣದಲ್ಲಿ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಭಾರತದ ಸೋಲಿನ ಹೊಣೆ ಹೊತ್ತುಕೊಳ್ಳಬೇಕಾಯಿತು.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 41.2 ಓವರ್‌ಗಳಲ್ಲಿ 186ರನ್ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ೪೬ ಓವರ್‌ಗಳಲ್ಲಿ ೯ ವಿಕೆಟ್ ನಷ್ಟ ಮಾಡಿಕೊಂಡು ೧೮೭ ರನ್ ಬಾರಿಸಿ ಜಯಶಾಲಿಯಾಯಿತು. ಬಾಂಗ್ಲಾದೇಶ ತಂಡ ಕೊನೇ ವಿಕೆಟ್‌ಗೆ ೫೧ ರನ್ ಪೇರಿಸುವ ಮೂಲಕ ಅಮೂಲ್ಯ ಜಯವನ್ನು ತನ್ನದಾಗಿಸಿಕೊಂಡಿತು.
ಭಾರತ ನೀಡಿದ್ದ ಸಣ್ಣ ಮೊತ್ತವನ್ನು ಪೇರಿಸಲು ಮುಂದಾದ ಬಾಂಗ್ಲಾದೇಶ ನಾಯಕ ಲಿಟನ್ ದಾಸ್ (೪೧) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡಿತು. ಆದರೆ ಕೊನೇ ಕ್ಷಣದಲ್ಲಿ ಭಾರತ ತಂಡದ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತ ಮೆಹೆದಿ ಹಸನ್ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು. ಭಾರತ ತಂಡ ತನ್ನ ಕಳಪೆ ಫೀಲ್ಡಿಂಗ್‌ಗೆ ಬೆಲೆ ತೆರಬೇಕಾಯಿತು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ೪೧.೨ ಓವರ್‌ಗಳಲ್ಲಿ ೧೮೬ ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ಪರ ಕೆ. ಎಲ್ ರಾಹುಲ್ ೭೩ ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಆಲ್‌ರೌಂಡರ್ ಶಕಿಬ್ ಅಲ್ ಹಸನ್ (೩೬ಕ್ಕೆ೫) ಮಾರಕ ದಾಳಿಗೆ ಟೀಮ್ ಇಂಡಿಯಾದ ಬ್ಯಾಟರ್‌ಗಳು ಕಂಗೆಟ್ಟರು. ಎಬಾದತ್ ಹೊಸೈನ್ ಕೂಡ ೪೭ಕ್ಕೆ ೪ ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ 41.2 ಓವರ್‌ಗಳಲ್ಲಿ 186ಕ್ಕೆ ಆಲೌಟ್ (ಕೆ.ಎಲ್. ರಾಹುಲ್ 73 ರೋಹಿತ್ ಶರ್ಮಾ 27, ಶ್ರೇಯಸ್ ಅಯ್ಯರ್ 24, ಶಕಿಬ್ ಅಲ್ ಹಸನ್ 36ಕ್ಕೆ5).
ಬಾಂಗ್ಲಾದೇಶ: ೪೬ ಓವರ್‌ಗಳಲ್ಲಿ೯ ವಿಕೆಟ್‌ಗೆ ೧೮೭ (ಲಿಟನ್ ದಾಸ್ ೪೧, ಮೆಹೆದಿ ಹಸನ್ ೩೮*, ಮೊಹಮ್ಮದ್ ಸಿರಾಜ್ ೩೨ಕ್ಕೆ೩, ಕುಲ್ದೀಪ್ ಸೇನ್ ೩೭ಕ್ಕೆ೨).
ಇದನ್ನೂ ಓದಿ | IND VS BAN | ಅಜರುದ್ದೀನ್ ದಾಖಲೆ ಮುರಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ!