Site icon Vistara News

IND vs BAN U19: ಅಹಂಕಾರಿ ಬಾಂಗ್ಲಾವನ್ನು ಬಗ್ಗು ಬಡಿದ ಭಾರತ; 84 ರನ್ ಗೆಲುವು

Arshin Kulkarni celebrates dismissing Ahrar Amin

ಬ್ಲೋಮ್‌ಫಾಂಟೀನ್‌: ಅಂಡರ್‌-19 ಏಕದಿನ ವಿಶ್ವಕಪ್‌ ಕ್ರಿಕೆಟ್‌(ICC Under 19 World Cup 2024) ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ(IND vs BAN U19) ಗೆಲುವಿನ ಶುಭಾರಂಭ ಕಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 84 ರನ್​ಗಳ ಗೆಲುವು ಸಾಧಿಸಿದೆ. ಸೌಮಿ ಪಾಂಡೆ( 4 ವಿಕೆಟ್), ಆದರ್ಶ್ ಸಿಂಗ್(76) ಭಾರತ ಗೆಲುವಿನ ಹೀರೊಗಳಾಗಿ ಮೂಡಿ ಬಂದರು.

​ಶನಿವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 251 ರನ್​ ಬಾರಿಸಿತು. ಜವಾಬಿತ್ತ ಬಾಂಗ್ಲಾದೇಶ ಆರಂಭದಿಂದಲೇ ಸತತ ವಿಕೆಟ್​ ಕಳೆದುಕೊಂಡು 45.5 ಓವರ್​ಗಳಲ್ಲಿ 167 ರನ್​ಗೆ ಸರ್ವಪತನ ಕಂಡಿತು.

ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಆರಂಭಿಕ ಆಘಾತ ಎದುರಿಸಿತು. ಅರ್ಶಿನ್‌ ಕುಲಕರ್ಣಿ(7) ಮತ್ತು ಮುಶೀರ್‌ ಖಾನ್‌(3) ವಿಕೆಟ್​ ಕಳೆದುಕೊಂಡಿತು. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದ ಆದರ್ಶ್​ ಸಿಂಗ್​ ಮತ್ತು ನಾಯಕ ಉದಯ್‌ ಸಹಾರಣ್‌ ಬಾಂಗ್ಲಾ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಮೇಲೆತ್ತಿದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು.

ಆದರ್ಶ್ ಮತ್ತು ಸಹಾರಣ್‌ ಜೋಡಿ ಸೇರಿಕೊಂಡು ಮೂರನೇ ವಿಕೆಟ್​ಗೆ 116 ರನ್​ ರಾಶಿ ಹಾಕಿದರು. 96 ಎಸೆತ ಎದುರಿಸಿದ ಆದರ್ಶ್​ 6 ಬೌಂಡರಿ ನೆರವಿನಿಂದ 76 ರನ್​ ಬಾರಿಸಿದರೆ, ಸಹಾರಣ್‌ 4 ಬೌಂಡರಿ ಸಹಾಯದಿಂದ 64 ರನ್​ ಬಾರಿಸಿದರು. ಈ ಜೋಡಿಯ ವಿಕೆಟ್​ ಪತನದ ಬಳಿಕ ಕ್ರೀಸ್​ಗಿಳಿದ ಪ್ರಿಯಾಂಶು ಮೋಲಿಯಾ(23), ಎ. ಅವನೀಶ್‌ ರಾವ್‌(23) ಮತ್ತು ಸಚಿನ್‌ ದಾಸ್‌(26) ರನ್​ ಬಾರಿಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೂಡ ಭಾರತದಂತೆ ಆರಂಭಿಕ ಆಘಾತ ಎದುರಿಸಿತು. 50 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡಿತು. ಆದರೆ, 5ನೇ ವಿಕೆಟ್​ಗೆ ಜತೆಯಾದ ಅರಿಫುಲ್ ಇಸ್ಲಾಂ ಮತ್ತು ಮೊಹಮ್ಮದ್ ಶಿಹಾಬ್ ಜೇಮ್ಸ್ ಸಮಯೋಚಿತ ಬ್ಯಾಟಿಂಗ್​ ಮೂಲಕ ಸಣ್ಣ ಹೋರಾಟವೊಂದನ್ನು ಜಾರಿಯಲ್ಲಿರಿಸಿದರು. ಈ ಜೋಡಿ 77 ರನ್​ಗಳ ಜತೆಯಾಟ ನಡೆಸಿತು. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ನಾಟಕೀಯ ಕುಸಿತ ಕಂಡ ಬಾಂಗ್ಲಾ ಅಂತಿಮವಾಗಿ 84 ರನ್​ಗಳ ಸೋಲಿಗೆ ತುತ್ತಾಯಿತು.

ಇದನ್ನೂ ಓದಿ IND vs ENG: ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಟೀಮ್​ ಇಂಡಿಯಾದ ದಾಖಲೆ ಹೇಗಿದೆ?

ಪಂದ್ಯದುದ್ದಕ್ಕೂ ಇತ್ತಂಡಗಳ ಆಟಗಾರರು ಲಾಲು ಕರೆದುಕೊಂಡು ಜಗಳವಾಡಿದ್ದು ಕಂಡು ಬಂದು. ಹಲವು ಬಾರಿ ಅಂಫೈರ್​ ಮಧ್ಯ ಪ್ರವೇಶಿಸಿ ಆಟಗಾರರನ್ನು ಸಮಧಾನ ಪಡೆಸಿದರು. ಭಾರತ ಪರ ಘಾತಕ ಬೌಲಿಂಗ್​ ಪ್ರದರ್ಶನ ತೋರಿದ ಸೌಮಿ ಪಾಂಡೆ 9.5 ಓವರ್​ ಎಸೆದು 24 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಕಿತ್ತರು. ಮುಶೀರ್‌ ಖಾನ್‌ 2 ವಿಕೆಟ್​ ಪಡೆದರು. ಬಾಂಗ್ಲಾ ಪರ ಮರುಫ್ ಮೃಧ 5 ವಿಕೆಟ್​ ಉರುಳಿಸಿದರು.

Exit mobile version