ರಾಜ್‌ಕೋಟ್: ಬೆನ್ ಡಕೆಟ್(133*) ಅವರ ಬಿರುಸಿನ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್‌ನಲ್ಲಿ(IND vs ENG 3rd Test) ಭಾರತಕ್ಕೆ ತಿರುಗೇಟು ನೀಡುವ ಸೂಚನೆ ನೀಡಿದೆ. ಭಾರತದ 445 ರನ್ಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸುತ್ತಿರುವ ಆಂಗ್ಲರ ಪಡೆ 2 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 238 ರನ್ ಹಿನ್ನಡೆಯೊಂದಿಗೆ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಬೆನ್ ಡಕೆಟ್ ಮತ್ತು ಜೋ ರೂಟ್(9*) ಕ್ರೀಸ್ನಲ್ಲಿದ್ದಾರೆ.
ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ಗೆ 326 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತ 130.5 ಓವರ್ ಬ್ಯಾಟಿಂಗ್ ನಡೆಸಿ 445 ರನ್ಗೆ ಆಲೌಟ್ ಆಯಿತು. ಪದಾರ್ಪಣ ಪಂದ್ಯವನ್ನಾಡಿದ ಧೃವ್ ಜುರೇಲ್(46), ಆರ್. ಅಶ್ವಿನ್ (37) ಮತ್ತು ಜಸ್ಪ್ರೀತ್ ಬುಮ್ರಾ(26) ಅವರ ಬ್ಯಾಟಿಂಗ್ ಹೋರಾಟ ಭಾರತದ ದ್ವಿತೀಯ ದಿನದ ಹೈಲೆಟ್ಸ್ ಆಗಿತ್ತು.
An assertive century from Ben Duckett ensured that England finished strong at the end of the second day's play.#WTC25 | #INDvENG 📝: https://t.co/1EwxUFWYGn pic.twitter.com/qA7Ouwprr0
— ICC (@ICC) February 16, 2024
ಡಕೆಟ್ ಶತಕ ಸಂಭ್ರಮ
ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿರುವ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಶತಕ ಬಾರಿಸುವ ಮೂಲಕ ಆಸರೆಯಾದರು. ಆಕ್ರಮಣಕಾರಿ ಆಟದ ಶೈಲಿ ಬಾಜ್‌ಬಾಲ್ ಕ್ರಿಕೆಟ್ಗೆ ತಕ್ಕ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು 88 ಎಸೆತದಲ್ಲಿ ಶತಕ ಪೂರ್ತಿಗೊಳಿಸಿದರು. ಇವರಿಗೆ ಓಲಿ ಪೋಪ್ ಮತ್ತೊಂದು ಕಡೆಯಲ್ಲಿ ಉತ್ತಮ ಸಾಥ್ ನೀಡಿದರು. ಈ ಜೋಡಿಯನ್ನು ಮೊಹಮ್ಮದ್ ಸಿರಾಜ್ ಬೇರ್ಪಡಿಸಿದರು. 39 ರನ್ ಗಳಿಸಿದ ಪೋಪ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಕೇವಲ ಒಂದು ಸೆಕೆಂಡ್ ಇರುವಾಗ ಡಿಆರ್ಎಸ್ ಪಡೆದ ಭಾರತ ಇದರಲ್ಲಿ ಯಶಸ್ಸು ಸಾಧಿಸಿತು.
ಇದನ್ನೂ ಓದಿ IND vs ENG: ಗಂಟೆಗೆ 146 ಕಿ.ಮೀ. ವೇಗದಲ್ಲಿ ಬಂದ ಚೆಂಡನ್ನು ಸಿಕ್ಸರ್ಗೆ ಬಡಿದಟ್ಟಿದ ಜುರೆಲ್
500 ವಿಕೆಟ್ ಸರದಾರನಾದ ಅಶ್ವಿನ್
ಟೀಮ್ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(Ravichandran Ashwin) ಅವರು ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ದಾಖಲೆ ಬರೆದರು. ಜತೆಗೆ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 619 ವಿಕೆಟ್ ಪಡೆದಿದ್ದಾರೆ.
𝗠𝘁. 𝟱𝟬𝟬! 🫡 🫡
— BCCI (@BCCI) February 16, 2024
Only the second #TeamIndia cricketer to reach this landmark in Tests 🙌 🙌
Congratulations, @ashwinravi99 👏 👏#INDvENG | @IDFCFIRSTBank pic.twitter.com/bP8wUs6rd0
ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಬೌಲರ್ಗಳ ಪೈಕಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(696*) ಮತ್ತು ಆಸ್ಟ್ರೇಲಿಯಾದ ನಥಾನ್ ಲಿಯೋನ್(512*) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.
ಜುರೆಲ್-ಅಶ್ವಿನ್ ಉತ್ತಮ ಜತೆಯಾಟ
ಭಾರತ ದ್ವಿತೀಯ ದಿನದಾಟ ಆರಂಭಿಸಿ 5 ರನ್ ಗಳಿಸುವಷ್ಟರಲ್ಲಿ ನೈಟ್ ವಾಚ್‌ಮನ್(4) ಹಾಗೂ ಶತಕವೀರ ರವೀಂದ್ರ ಜಡೇಜಾ(112) ವಿಕೆಟ್ ಕಳೆದುಕೊಂಡಿತು. ಈ ವೇಳೆ 8ನೇ ವಿಕೆಟ್ಗೆ ಜತೆಯಾದ ಅಶ್ವಿನ್ ಮತ್ತು ಚೊಚ್ಚಲ ಪಂದ್ಯವಾಡಿದ ಧೃವ್ ಜುರೆಲ್ ಸೇರಿಕೊಂಡು ಅತ್ಯಮೂಲ್ಯ 77 ರನ್ ಒಟ್ಟುಗೂಡಿಸಿದರು. ಇವರ ಈ ಬ್ಯಾಟಿಂಗ್ ಸಾಹಸದಿಂದ ತಂಡ 450ರ ಸನಿಹದ ಮೊತ್ತ ದಾಖಲಿಸಿತು.
ಕೆ.ಎಸ್ ಭರತ್ ಅವರ ಬದಲು ಆಡಲಿಳಿದ ಆಗ್ರಾ ಮೂಲದ 23 ವರ್ಷದ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿಯಂತೆ ಬ್ಯಾಟ್ ಬೀಸಿದ ಜುರೆಲ್ 104 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು. ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮಾರ್ಕ್ ವುಡ್ 4 ವಿಕೆಟ್ ಕಿತ್ತರು. ಮಾರ್ಕ್ ವುಡ್(Mark Wood) ಅವರು ಗಂಟೆಗೆ 146 ಕಿ.ಮೀ. ವೇಗದಲ್ಲಿ ಎಸೆದ ಚೆಂಡನ್ನು ಜುರೆಲ್ ಅಪ್ಪರ್ ಕಟ್ ಮೂಲಕ ಲೀಲಾಜಾಲವಾಗಿ ಸಿಕ್ಸರ್ಗೆ ಬಡಿದಟ್ಟಿದರು.
ಗಂಗೂಲಿ ದಾಖಲೆ ಹಿಂದಿಕ್ಕಿದ ಜಡೇಜಾ
ಜಡೇಜಾ ದ್ವಿತೀಯ ದಿನದಾಟದಲ್ಲಿ 2 ರನ್ ಗಳಿಸಿ ಒಟ್ಟು 225 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ನೆರವಿನಿಂದ 112 ರನ್ ಗಳಿಸಿ ಜೋ ರೂಟ್ಗೆ ವಿಕೆಟ್ ಒಪ್ಪಿಸಿದರು. ಇದೇ ವೇಳೆ ಜಡೇಜಾ ಇಂಗ್ಲೆಂಡ್ ವಿರುದ್ಧ 1000 ಟೆಸ್ಟ್ ರನ್ ಗಳಿಸಿದ 15ನೇ ಭಾರತೀಯ ಆಟಗಾರ ಎನಿಸಿಕೊಂಡರು.
5 ರನ್ ದಂಡ
ಈ ಪಂದ್ಯದಲ್ಲಿ ಭಾರತಕ್ಕೆ ಐದು(India handed five-run penalty) ರನ್‌ಗಳ ದಂಡ ವಿಧಿಸಲಾಯಿತು. ಇದಕ್ಕೆ ಕಾರಣ ಆರ್.ಅಶ್ವಿನ್ ಅವರು(Ravichandran Ashwin) ಪಿಚ್ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ದು. ಭಾರತದ ಮೊದಲ ಇನಿಂಗ್ಸ್‌ನ 102 ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ. ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಇನಿಂಗ್ಸ್ ಆರಂಭಿಸುವ ಮುನ್ನವೇ 5 ರನ್ಗಳು ಲಭಿಸಿತು. ಎಂಸಿಸಿಯ ಕಾನೂನು 41.14.1 ಪ್ರಕಾರ ಉದ್ದೇಶಪೂರ್ವಕ ಪ್ರಕರಣ ಇದಾಗಿದೆ. 2016ರ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಇಂದೋರ್ ಟೆಸ್ಟ್‌ನಲ್ಲಿ, ರವೀಂದ್ರ ಜಡೇಜಾ ಮಾಡಿದ ತಪ್ಪಿಗೆ ಕಿವೀಸ್ಗೆ 5 ರನ್ ನೀಡಲಾಗಿತ್ತು.