Site icon Vistara News

IND vs ENG 3rd Test: ಟೆಸ್ಟ್​ಗೆ ಸರ್ಫರಾಜ್​ ಪದಾರ್ಪಣೆ; ಮೈದಾನದಲ್ಲೇ ತಂದೆ ಭಾವುಕ

Sarfaraz Khan

ರಾಜ್​ಕೋಟ್​​: ದೇಶೀಯ ಕ್ರಿಕೆಟ್‌ನಲ್ಲಿ ರನ್‌ ಪ್ರವಾಹವನ್ನೇ ಹರಿಸುತ್ತ ಬಂದಿರುವ ಸರ್ಫ‌ರಾಜ್‌ ಖಾನ್(Sarfaraz Khan)​ ಅವರ ಟೀಮ್​ ಇಂಡಿಯಾ ಪರ ಆಡುವ ಕನಸು ಕೊನೆಗೂ ನನಸಾಗಿದೆ. ಇಂದು ಆರಣಂಭಗೊಂಡ ಇಂಗ್ಲೆಂಡ್​ ವಿರುದ್ಧದ ಮೂರನೇ(IND vs ENG 3rd Test) ಟೆಸ್ಟ್​ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಮಾಜಿ ನಾಯಕ ಅನಿಲ್​ ಕುಂಬ್ಳೆ ಅವರು ಟೆಸ್ಟ್​ ಕ್ಯಾಪ್​ ನೀಡಿ ಅವರನ್ನು ತಂಡಕ್ಕೆ ಬರಮಾಡಿಕೊಂಡರು. ಮಗನಿಗೆ ಟೆಸ್ಟ್​ ಕ್ಯಾಪ್​ ಸಿಗುತ್ತಿದ್ದಂತೆ ಈ ಕ್ಷಣವನ್ನು ನೋಡುತ್ತಿದ್ದ ಅವರ ತಂದೆ ಭಾವುಕರಾಗಿ ಮೈದಾನದಲ್ಲೇ ಆನಂದಭಾಷ್ಟ ಸುರಿಸಿದರು. ಈ ಫೋಟೊ ವೈರಲ್​ ಆಗಿದೆ.

ಸರ್ಫರಾಜ್​ಗೆ ಎಂದೋ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗಬೇಕಿತ್ತು. ಆದರೆ ಫಿಟ್‌ನೆಸ್‌ ಮಾನದಂಡದ ಹಿನ್ನೆಲೆಯಲ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಈ ಹಿಂದೆ ಸರ್ಫರಾಜ್‌ ಅವರನ್ನು ಕಡೆಗಣಿಸಿದ ವಿಚಾರವಾಗಿ ಬಿಸಿಸಿಐ ವಿರುದ್ಧ ಹಲವು ಮಾಜಿ ಆಟಗಾರರು ಅಸಮಾದಾನ ವ್ಯಕ್ತಪಡಿಸಿದ್ದರು. ಇದಕ್ಕೆ ಬಿಸಿಸಿಐ ತಕ್ಕ ಉತ್ತರವನ್ನು ಕೂಡ ನೀಡಿತ್ತು. ಫಿಟ್‌ ನೆಸ್‌ ಸಮಸ್ಯೆ ಮತ್ತು ಮೈದಾನದ ಹೊರಗಿನ ವರ್ತನೆಯ ಕಾರಣದಿಂದಲೇ ಆಯ್ಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಕೊನೆಗೂ ಅವರಿಗೆ ಅವಕಾಶ ಸಿಕ್ಕಿದೆ.

ಸರ್ಫರಾಜ್ ಖಾನ್​ ಅವರು ಭಾರತ ಪರ ಪದಾರ್ಪಣೆ ಮಾಡುವ ಸಂದರ್ಭ ಅವರ ಪತ್ನಿ ಶಾಹಿಸ್ತಾ ಖಾನ್​ ಕೂಡ ಮೈದಾನದಲ್ಲಿ ಸಾಕ್ಷಿಯಾಗಿದ್ದರು. ಕಳೆದ ವರ್ಷ ಸರ್ಫರಾಜ್ ಮದುವೆಯಾಗಿತ್ತು. ಸರ್ಫರಾಜ್​ ಖಾನ್​ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 96 ಮತ್ತು 55 ರನ್ ಬಾರಿಸಿದ್ದರು. ಹಿಂದಿನ ಮೂರು ರಣಜಿ ಟ್ರೋಫಿ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ತೋರಿದ್ದರು.

22 ವರ್ಷದ ಸರ್ಫರಾಜ್ 45 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 3912 ರನ್​ ಬಾರಿಸಿದ್ದಾರೆ. ಇದರಲ್ಲಿ 14 ಶತಕ ಮತ್ತು 11 ಅರ್ಧಶತಕ ಒಳಗೊಂಡಿದೆ. ಅಜೇಯ 301 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

23 ವರ್ಷದ ವಿಕೆಟ್‌ ಕೀಪರ್‌ ಧ್ರುವ ಜುರೆಲ್‌(Dhruv Jurel) ಕೂಡ ಟೀಮ್​ ಇಂಡಿಯಾ ಪರ ಪದಾರ್ಪಣೆ ಗೈದರು. ಬಿಸಿಸಿಐ ಬುಧವಾರ ಜುರೆಲ್​ ಅವರನ್ನು ವಿಶೇಷ ಸಂದರ್ಶನ ಮಾಡುವ ಮೂಲಕ ಭಾರತದ ಜೆರ್ಸಿಯಲ್ಲಿ ಫೋಟೊ ಶೂಟ್​ ಮಾಡಿತ್ತು. ಈ ವೇಳೆಯೇ ಅವರು ಭಾರತ ಪರ ಆಡುವುದು ಖಚಿತವಾಗಿತ್ತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಕೈಗೊಂಡಿದೆ.

ಭಾರತ ತಂಡ


ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್(ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್.

Exit mobile version