ರಾಂಚಿ: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಭಾರತ ತಂಡದ ಯುವ ವಿಕೆಟ್ ಕೀಪರ್ ಧ್ರುವ ಜುರೇಲ್(Dhruv Jurel) ನಾಲ್ಕನೇ ಪಂದ್ಯಕ್ಕೂ(IND vs ENG 4th Test) ಮುನ್ನ ಅಪಾರ ಉತ್ಸಾಹದಲ್ಲಿದ್ದಾರೆ. ಇದಕ್ಕೆ ಕಾರಣ ಈ ಪಂದ್ಯ ನಡೆಯುತ್ತಿರುವುದು ಧೋನಿಯ(MS Dhoni) ತವರಾದ ರಾಂಚಿಯಲ್ಲಿ(Ranchi).
ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಮತ್ತು ಅವರಂತೆ ಕ್ರಿಕೆಟ್ನಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಜುರೇಲ್ ಅವರು ಧೋನಿಯನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಬಿಸಿಸಿಐ ಡಾಟ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
‘ಮಹಿ ಭಾಯ್ ಅವರನ್ನು ಭೇಟಿಯಾಗುವುದು ನನ್ನ ಬಹುದಿನಗಳ ಕನಸಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಒಂದು ಬಾರಿ ಭೇಟಿಯಾಗಿದ್ದೆ. ಇದಾದ ಬಳಿಕ ಅವರನ್ನು ಭೇಟಿ ಮಾಡಿಲ್ಲ. ಅಂದು ಅವರು ನೀಡಿದ ಸಲಹೆಯಿಂದ ನಾನು ಟೀಮ್ ಇಂಡಿಯಾ ಪರ ಆಡುವಂತಾಗಿದ್ದೇನೆ. ಇದೀಗ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಅವರನ್ನು ಭೇಟಿಯಾಗುವ ಆಸೆಯನ್ನು ಹೋಂದಿದ್ದೇನೆ. ಅವರಿಂದ ಮತ್ತಷ್ಟು ಕಲಿಯುವ ಆಸೆ ಇದೆ’ ಎಂದು ಜುರೇಲ್ ಹೇಳಿದ್ದಾರೆ.
‘ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಧೋನಿ ಅವರಲ್ಲಿ ಮೊದಲ ಬಾರಿ ಮಾತನಾಡಿದ್ದೆ. ಅದು ನನ್ನ ಕನಸು ನನಸಾದ ಕ್ಷಣವಾಗಿತ್ತು. ಧೋನಿಯ ಮುಂದೆ ನಿಂತು ನಾನು ಮಾತನಾಡುತ್ತಿರುವೆ ಎಂಬುದನ್ನೇ ನಂಬಲಾಗಿರಲಿಲ್ಲ. ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದೆ. ಏಕಾಗ್ರತೆಯಿಂದ ಕ್ರಿಕೆಟ್ ಆಡು ಎಂದಷ್ಟೇ ಆ ಸಂದರ್ಭದಲ್ಲಿ ಧೋನಿ ಸಲಹೆ ಕೊಟ್ಟಿದ್ದರು’ ಎಂದು ಜುರೇಲ್ ನೆನಪಿಸಿಕೊಂಡರು.
ಇದನ್ನೂ ಓದಿ IND vs ENG 4th Test: ರಾಂಚಿಯಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ?
ಜುರೇಲ್ ಅವರು ಪದಾರ್ಪಣ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿ 46 ರನ್ ಗಳಿಸಿದ್ದರು. ವಿಕೆಟ್ ಕೀಪಿಂಗ್ನಲ್ಲಿಯೂ ಗಮನಸೆಳೆದು ಧೋನಿಯ ಶೈಲಿಯಲ್ಲೇ ಬೆನ್ ಡಕೆಟ್ ಅವರುನ್ನು ಕ್ಷಣ ಮಾತ್ರದಲ್ಲಿ ರನೌಟ್ ಮಾಡಿದ್ದರು. ಜುರೇಲ್ ಅವರ ಬ್ಯಾಟಿಂಗ್ ಶೈಲಿಯನ್ನು ಗಮನಿಸುವಾಗ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕಣ್ಣ ಮುಂದೆ ಬರುತ್ತದೆ. ಕೊಹ್ಲಿ ಯಾವ ರೀತಿ ಡಿಫೆನ್ಸ್, ಮತ್ತು ಕವರ್ ಡ್ರೈವ್ ಹೊಡೆಯುತ್ತಾರೋ ಅದೇ ರೀತಿಯಲ್ಲಿ ಜುರೇಲ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.
Getting Ranchi Ready 👌 👌#TeamIndia | #INDvENG | @IDFCFIRSTBank pic.twitter.com/UiZnrbdWBc
— BCCI (@BCCI) February 21, 2024
ಕೇವಲ ಜುರೇಲ್ ಮಾತ್ರವಲ್ಲಿ ಶುಭಮನ್ ಗಿಲ್ ಕೂಡಾ ಧೋನಿಯನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ‘ರಾಂಚಿಗೆ ಬಂದಾಗಲೆಲ್ಲಾ ಧೋನಿ ನೆನಪು ಕಾಡುತ್ತದೆ. ನಾವು ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ. ಈ ಹಿಂದೆ ಭಾರತ ತಂಡ ರಾಂಚಿಯಲ್ಲಿ ಕ್ರಿಕೆಟ್ ಆಡಲು ಬಂದಾಗ ಧೋನಿ ಅಚ್ಚರಿ ಎಂಬಂತೆ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿ ಆಟಗಾರರನ್ನು ಮಾತನಾಡಿಸಿದ್ದರು. ಈ ಬಾರಿಯೂ ಧೋನಿ ಭೇಟಿ ನೀಡಿ ಜುರೇಲ್ ಆಸೆಯನ್ನು ತೀರಿಸಿಯಾರೇ ಎನ್ನುವುದನ್ನು ಕಾದು ನೋಡಬೇಕಿದೆ.