Site icon Vistara News

IND vs ENG 5th Test: ಭಾರತದ ಹಿಡಿತದಲ್ಲಿ ಧರ್ಮಶಾಲಾ ಟೆಸ್ಟ್​

IND vs ENG

ಧರ್ಮಶಾಲಾ: ಇಂಗ್ಲೆಂಡ್​ ವಿರುದ್ಧ ಇಲ್ಲಿ ಸಾಗುತ್ತಿರುವ ಅಂತಿಮ ಟೆಸ್ಟ್​ನಲ್ಲಿ(IND vs ENG 5th Test) ಭಾರತ ಸದ್ಯ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್​ನಲ್ಲಿ 1 ವಿಕೆಟ್​ ನಷ್ಟಕ್ಕೆ 135 ರನ್​ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಇಂಗ್ಲೆಂಡ್​ನ ಮೊದಲ ಇನಿಂಗ್ಸ್​ ಮೊತ್ತವನ್ನು ಬೆನ್ನಟ್ಟಲು ಇನ್ನು 83 ರನ್​ ಅಗತ್ಯವಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಈ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​, ಭೋಜನ ವಿರಾಮದವರೆಗೆ ಕೇವಲ 2 ವಿಕೆಟ್​ಗೆ 100ರ ಗಡಿ ದಾಟಿ ಉತ್ತಮ ಸ್ಥಿತಿಯಲ್ಲಿತ್ತು. ಆ ಬಳಿಕ ಹಠಾತ್​ ಕುಸಿತ ಕಂಡು 218 ರನ್​ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟುತ್ತಿರುವ ಭಾರತ, ಯಶಸ್ವಿ ಜೈಸ್ವಾಲ್​ ಮತ್ತು ರೋಹಿತ್​ ಶರ್ಮಾ ಅವರ ಅಜೇಯ ಅರ್ಧಶತಕ ನೆರವಿನಿಂದ 1 ವಿಕೆಟ್​ಗೆ 135 ರನ್​ ಗಳಿಸಿದೆ.

ಆಂಗ್ಲರ ಆಕ್ರಮಣಕಾರಿ ಬಾಜ್​ ಬಾಲ್ ಶೈಲಿಯಲ್ಲೇ ಬ್ಯಾಟಿಂಗ್​ ನಡೆಸಿದ ಜೈಸ್ವಾಲ್ 58 ಎಸೆತಗಳಿಂದ 57 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ಅವರ ಈ ಬಿರುಸಿನ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 3 ಸಿಕ್ಸರ್​ ಮತ್ತು 5 ಬೌಂಡರಿ ದಾಖಲಾಯಿತು. ಮೂರು ಸಿಕ್ಸರ್​ ​ಶೋಯೆಬ್ ಬಶೀರ್ ಅವರ ಒಂದೇ ಓವರ್​ನಲ್ಲಿ ಸಿಡಿಯಿತು. ರೋಹಿತ್​ ಜತೆಗೂಡಿ ಮೊದಲ ವಿಕೆಟ್​ಗೆ 104 ರನ್​ ಒಟ್ಟುಗೂಡಿಸಿದರು. ಜೈಸ್ವಾಲ್​ ಹಲವು ದಾಖಲೆಗಳನ್ನು ಕೂಡ ಈ ಪಂದ್ಯದಲ್ಲಿ ಬರೆದರು. ಸದ್ಯ ರೋಹಿತ್​ ಶರ್ಮ ಅವರು 6 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 52*, ಶುಭಮನ್​ ಗಿಲ್​(26*) ಬಾರಿಸಿ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಉತ್ತಮ ಆರಂಭದ ಬಳಿಕ ಕುಸಿದ ಆಂಗ್ಲರು

ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ಪರ ಆರಂಭಿಸಿದ ಜಾಕ್​ ಕ್ರಾಲಿ ಮತ್ತು ಬೆನ್​ ಡಕೆಟ್​ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ಉತ್ತಮ ರನ್​ ಕಲೆ ಹಾಕಿದರು. ಕ್ರೀಸ್​ನಲ್ಲಿ ಬೇರೂರಿದ್ದ ಈ ಜೋಡಿಯನ್ನು ಅಂತಿಮವಾಗಿ ಕುಲ್​ದೀಪ್​ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಶುಭಮನ್​ ಗಿಲ್​ ಅವರು ಹಿಮ್ಮುಖವಾಗಿ ಓಡಿ ಅತ್ಯಂತ ಕಷ್ಟದ ಕ್ಯಾಚೊಂದನ್ನು ಹಿಡಿಯುವ ಮೂಲಕ ಡಕೆಟ್​ಗೆ ಪೆವಿಲಿಯನ್​ ದಾರಿ ತೋರಿದರು. ಅವರ ಗಳಿಕೆ 27. ಕ್ರಾಲಿ ಮತ್ತು ಡಕೆಟ್​ ಜೋಡಿ ಮೊದಲ ವಿಕೆಟ್​ಗೆ 64 ರನ್​ ಜತೆಯಾಟ ನಡೆಸಿತು.

ಜಾಕ್​ ಕ್ರಾಲಿ ಅವರು 79 ರನ್​ ಗಳಿಸಿ ಕುಲ್​ದೀಪ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. 100ನೇ ಟೆಸ್ಟ್​ ಆಡುತ್ತಿರುವ ಜಾನಿ ಬೇರ್​ಸ್ಟೋ ಬಡಬಡನೆ ಒಂದೆರಡು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರೂ ಇದೇ ಆಟವನ್ನು ಮುಂದುವರಿಸುವಲ್ಲಿ ವಿಫಲರಾದರು. ತಲಾ 2 ಸಿಕ್ಸರ್​ ಮತ್ತು ಬೌಂಡರಿ ನೆರವಿನಿಂದ 29ರನ್​ಗೆ ಆಟ ಮುಗಿಸಿದರು.ಅನುಭವಿ ರೂಟ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ಜಡೇಜಾಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಪತನದ ಬಳಿಕ ಇಂಗ್ಲೆಂಡ್​ ಕುಸಿತ ಆರಂಭಗೊಂಡಿತು. ನಾಯಕ ಬೆನ್​ ಸ್ಟೋಕ್ಸ್​ ಶೂನ್ಯಕ್ಕೆ ಔಟಾದರು. ಬೆನ್​ ಫೋಕ್ಸ್​ ಅಂತಿಮ ಕ್ಷಣದ ವರೆಗೆ ಹೋರಾಡಿದರೂ ಕೂಡ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗಲಿಲ್ಲ. 24 ರನ್​ ಬಾರಿಸಿ ಅಶ್ವಿನ್Ravichandran Ashwin​ ಸ್ಪಿನ್​ ಬಲೆಗೆ ಬಿದ್ದರು.

ವಿಶೇಷ ದಾಖಲೆ ಬರೆದ ಕುಲ್​ದೀಪ್​

ಕುಲ್​ದೀಪ್​ ಯಾದವ್​ ಅವರು 4 ವಿಕೆಟ್​ ಕೀಳುತಿದ್ದಂತೆ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದರು. ಒಟ್ಟಾರೆಯಾಗಿ 5 ವಿಕೆಟ್​ ಕಿತ್ತರು. ವಿಶೇಷ ಎಂದರೆ ಕುಲ್​ದೀಪ್​ ಅವರು 2017ರಲ್ಲಿ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್​ ಪದಾರ್ಪಣೆ ಮಾಡಿದ್ದರು. ಇದೀಗ ಪದಾರ್ಪಣೆ ಮಾಡಿದ ಮೈದಾನದಲ್ಲಿಯೇ 50 ವಿಕೆಟ್​ ಕೂಡ ಪೂರ್ತಿಗೊಳಿಸಿದರು. 100ನೇ ಟೆಸ್ಟ್​ ಆಡಲಿಳಿದ ಅಶ್ವಿನ್​ ಕೂಡ 51 ರನ್​ ವೆಚ್ಚದಲ್ಲಿ 4 ವಿಕೆಟ್​ ಉರುಳಿಸಿದರು. ಜಡೇಜಾ ಒಂದು ವಿಕೆಟ್​ ಪಡೆದರು. ಇಲ್ಲಿಗೆ ಎಲ್ಲಾ 10 ವಿಕೆಟ್​ ಕೂಡ ಸ್ಪಿನ್ನರ್​ಗಳ ಪಾಲಾಯಿತು.

Exit mobile version