Site icon Vistara News

IND vs ENG 5th Test: ಕುಲ್​ದೀಪ್​, ಅಶ್ವಿನ್ ಸ್ಪಿನ್ ದಾಳಿಗೆ ಕುಸಿದ ಇಂಗ್ಲೆಂಡ್​

Ecstasy for Kuldeep Yadav and India, agony for Ollie Pope

ಧರ್ಮಶಾಲಾ: ಚೈನಾಮನ್​ ಖ್ಯಾತಿಯ ಸ್ಪಿನ್​ ಬೌಲರ್​ ಕುಲ್​ದೀಪ್​ ಯಾದವ್(5) ಮತ್ತು ಶತಕದ ಟೆಸ್ಟ್​ ಆಡುತ್ತಿರುವ ಅಶ್ವಿನ್(4)​​ ಅವರ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್​ ಅಂತಿಮ ಟೆಸ್ಟ್​ನ(IND vs ENG 5th Test) ಮೊದಲ ಇನಿಂಗ್ಸ್​ನಲ್ಲಿ 218 ರನ್​ಗಳಿಗೆ ಸರ್ವಪತನ ಕಂಡಿದೆ. ಕುಲ್​ದೀಪ್(kuldeep yadav)​ ಟೆಸ್ಟ್​ನಲ್ಲಿ 50 ವಿಕೆಟ್​ಗಳನ್ನು ಪೂರ್ತಿಗೊಸಿದ ಜತೆಗೆ ಒಟ್ಟು 5 ವಿಕೆಟ್ ಕಿತ್ತು ಮಿಂಚಿದರು.

ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಇಂದು ಆರಂಭಗೊಂಡ ಈ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ಹಠಾತ್ ಕುಸಿತ ಕಂಡು 57.4 ಓವರ್​ಗಳಲ್ಲಿ 218 ರನ್​ಗೆ ಕುಸಿತ ಕಂಡಿತು.

​ಇನಿಂಗ್ಸ್​ ಆರಂಭಿಸಿದ ಜಾಕ್​ ಕ್ರಾಲಿ ಮತ್ತು ಬೆನ್​ ಡಕೆಟ್​ ಅವರು ಮೊದಲ ಸೆಸನ್​ನಲ್ಲಿ ವಿಕೆಟ್​ ಬೀಳದಂತೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದರು. ಕ್ರೀಸ್​ನಲ್ಲಿ ಬೇರೂರಿದ್ದ ಈ ಜೋಡಿಯನ್ನು ಅಂತಿಮವಾಗಿ ಕುಲ್​ದೀಪ್​ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಶುಭಮನ್​ ಗಿಲ್​ ಅವರು ಹಿಮ್ಮುಖವಾಗಿ ಓಡಿ ಅತ್ಯಂತ ಕಷ್ಟದ ಕ್ಯಾಚೊಂದನ್ನು ಹಿಡಿಯುವ ಮೂಲಕ ಡಕೆಟ್​ಗೆ ಪೆವಿಲಿಯನ್​ ದಾರಿ ತೋರಿದರು. ಅವರ ಗಳಿಕೆ 27. ಕ್ರಾಲಿ ಮತ್ತು ಡಕೆಟ್​ ಜೋಡಿ ಮೊದಲ ವಿಕೆಟ್​ಗೆ 64 ರನ್​ ಜತೆಯಾಟ ನಡೆಸಿತು.

ಜಾಕ್​ ಕ್ರಾಲಿ ಅವರು 79 ರನ್​ ಗಳಿಸಿ ಕುಲ್​ದೀಪ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. 100ನೇ ಟೆಸ್ಟ್​ ಆಡುತ್ತಿರುವ ಜಾನಿ ಬೇರ್​ಸ್ಟೋ ಬಡಬಡನೆ ಒಂದೆರಡು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರೂ ಇದೇ ಆಟವನ್ನು ಮುಂದುವರಿಸುವಲ್ಲಿ ವಿಫಲರಾದರು. ತಲಾ 2 ಸಿಕ್ಸರ್​ ಮತ್ತು ಬೌಂಡರಿ ನೆರವಿನಿಂದ 29ರನ್​ಗೆ ಆಟ ಮುಗಿಸಿದರು. ಅನುಭವಿ ರೂಟ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ಜಡೇಜಾಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಪತನದ ಬಳಿಕ ಇಂಗ್ಲೆಂಡ್​ ಕುಸಿತ ಆರಂಭಗೊಂಡಿತು. ನಾಯಕ ಬೆನ್​ ಸ್ಟೋಕ್ಸ್​ ಶೂನ್ಯಕ್ಕೆ ಔಟಾದರು. ಬೆನ್​ ಫೋಕ್ಸ್​ ಅಂತಿಮ ಕ್ಷಣದ ವರೆಗೆ ಹೋರಾಡಿದರೂ ಕೂಡ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗಲಿಲ್ಲ. 24 ರನ್​ ಬಾರಿಸಿ ಅಶ್ವಿನ್Ravichandran Ashwin​ ಸ್ಪಿನ್​ ಬಲೆಗೆ ಬಿದ್ದರು.

ಇದನ್ನೂ ಓದಿ Dinesh Karthik: ಐಪಿಎಲ್​ಗೆ ವಿದಾಯ ಹೇಳಲು ಸಜ್ಜಾದ ದಿನೇಶ್ ಕಾರ್ತಿಕ್; ಇದುವೇ ಕೊನೆಯ ಪಂದ್ಯ!

50 ವಿಕೆಟ್​ ಪೂರ್ತಿಗೊಳಿಸಿದ ಕುಲ್​ದೀಪ್


ಕುಲ್​ದೀಪ್​ ಯಾದವ್​ ಅವರು 4 ವಿಕೆಟ್​ ಕೀಳುತಿದ್ದಂತೆ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದರು. ಒಟ್ಟಾರೆಯಾಗಿ 5 ವಿಕೆಟ್​ ಕಿತ್ತರು. ವಿಶೇಷ ಎಂದರೆ ಕುಲ್​ದೀಪ್​ ಅವರು 2017ರಲ್ಲಿ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್​ ಪದಾರ್ಪಣೆ ಮಾಡಿದ್ದರು. ಇದೀಗ ಪದಾರ್ಪಣೆ ಮಾಡಿದ ಮೈದಾನದಲ್ಲಿಯೇ 50 ವಿಕೆಟ್​ ಕೂಡ ಪೂರ್ತಿಗೊಳಿಸಿದರು. 100ನೇ ಟೆಸ್ಟ್​ ಆಡಲಿಳಿದ ಅಶ್ವಿನ್​ ಕೂಡ 51 ರನ್​ ವೆಚ್ಚದಲ್ಲಿ 4 ವಿಕೆಟ್​ ಉರುಳಿಸಿದರು. ಜಡೇಜಾ ಒಂದು ವಿಕೆಟ್​ ಪಡೆದರು. ಇಲ್ಲಿಗೆ ಎಲ್ಲಾ 10 ವಿಕೆಟ್​ ಕೂಡ ಸ್ಪಿನ್ನರ್​ಗಳ ಪಾಲಾಯಿತು.

ಪಡಿಕ್ಕಲ್​ ಪದಾರ್ಪಣೆ


ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ದಿನವಾದ ಬುಧವಾರ ಅಭ್ಯಾಸದ ವೇಳೆ ಪಾದದ ಗಾಯಕ್ಕೆ ತುತ್ತಾದ ಕಾರಣ ರಜತ್​ ಪಾಟಿದಾರ್​ ಅವರು ಈ ಪಂದ್ಯದಿಂದ ಹೊರಗುಳಿದರು. ಅವರ ಸ್ಥಾನದಲ್ಲಿ ದೇವದತ್ತ ಪಡಿಕ್ಕಲ್​ ಆಡುವ ಮೂಲಕ ಭಾರತ ಟೆಸ್ಟ್​ಗೆ ಪದಾರ್ಪಣೆ ಮಾಡಿದರು. ಪಡಿಕ್ಕಲ್​ಗೆ ಅಶ್ವಿನ್​ ಟೆಸ್ಟ್​ ಕ್ಯಾಪ್​ ನೀಡಿ ತಂಡಕ್ಕೆ ಸ್ವಾಗತಿಸಿದರು. ಭಾರತದ 314ನೇ ಟೆಸ್ಟ್​ ಆಟಗಾರ ಎಂಬ ಹಿರಿಮೆಗೆ ಪಡಿಕ್ಕಲ್​ ಪಾತ್ರರಾದರು.

Exit mobile version