ಮುಂಬಯಿ: ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ(IND vs ENG) ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾದ ವಿರಾಟ್ ಕೊಹ್ಲಿ(Virat Kohli) ಅವರು ಮುಂದಿನ ಟೆಸ್ಟ್ ಪಂದ್ಯಗಳಿಗೆ ತಂಡ ಸೇರಲಿದ್ದಾರಾ ಎನ್ನುವ ಬಗ್ಗೆ ಬಿಸಿಸಿಐ(BCCI) ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಅವರು ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಕೂಡ ಮುಕ್ತಾಯಕ ಹಂತಕ್ಕೆ ಬಂದು ನಿಂತಿದೆ. ಇನ್ನು ಕೇವಲ 2 ದಿನಗಳ ಆಟ ಮಾತ್ರ ಬಾಕಿ ಉಳಿದಿದೆ. ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ಆರಂಭಗೊಳ್ಳಲಿದೆ. ಹೀಗಿದ್ದರೂ ಬಿಸಿಸಿಐ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿಲ್ಲ. ಅಲ್ಲದೆ ರಾಹುಲ್, ಜಡೇಜಾ ಗಾಯಗೊಂಡು ದ್ವಿತೀಯ ಟೆಸ್ಟ್ನಿಂದ ಹೊರಗುಳಿದಿದ್ದಾರೆ ಇವರ ಗಾಯದ ಬಗ್ಗೆಯೂ ಯಾವುದೇ ಅಪ್ಡೆಟ್ಸ್ ಇಲ್ಲವಾಗಿದೆ.
ಮೂಲಗಳ ಪ್ರಕಾರ ಗಾಯದ ಸಮಸ್ಯೆ ಎದುರಿಸುತ್ತಿರುವ ಮೊಹಮ್ಮದ್ ಶಮಿ(Mohammed Shami), ರವೀಂದ್ರ ಜಡೇಜಾ(Ravindra Jadeja) ಹಾಗೂ ವೈಯಕ್ತಿಕ ಕಾರಣ ನೀಡಿ ರಜೆಯಲ್ಲಿರುವ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ IND vs ENG: ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ಬೈದ ರೋಹಿತ್ ಶರ್ಮ
ಸ್ನಾಯು ಸೆಳೆತಕ್ಕೆ ಒಳಗಾಗಿ ದ್ವಿತೀಯ ಟೆಸ್ಟ್ಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಅವರು ಮೂರನೇ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದೊಮ್ಮೆ ಕೊಹ್ಲಿ, ಜಡೇಜಾ ಮತ್ತು ಶಮಿ ಸರಣಿಯಿಂದ ಹೊರಗುಳಿದರೆ ಈಗ ತಂಡದಲ್ಲಿರುವ ಆಟಗಾರರೇ ಮುಂದಿನ ಪಂದ್ಯಕ್ಕೂ ಅವಕಾಶ ಪಡೆಯಬಹುದು.
2ನೇ ಮಗುವಿನ ನಿರೀಕ್ಷೆಯಲ್ಲಿ ಕೊಹ್ಲಿ-ಅನುಷ್ಕಾ
ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿಯಲು ಕಾರಣ ಏನೆಂಬುದನ್ನು ಅವರ ಗೆಳೆಯ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಅವರು ಶನಿವಾರ ಆನ್ ಲೈನ್ ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದರು. ಕೊಹ್ಲಿ ಮತ್ತು ಅನುಷ್ಕಾ 2ನೇ ಮಗುವಿನ ನಿರೀಕ್ಷೆಯಲ್ಲಿರುವುದು ಖಚಿತ ಎಂದು ಹೇಳಿದ್ದರು.
AB De Villiers said, "Virat Kohli and Anushka Sharma are expecting their 2nd child, so Virat is spending time with his family". (AB YT). pic.twitter.com/qurRKnFK1q
— Virat Kohli Fan Club (@Trend_VKohli) February 3, 2024
ಆನ್ಲೈನ್ ಸಂದರ್ಶನದಲ್ಲಿ ಮಾತನಾಡಿದ ಡಿ ವಿಲಿಯರ್ಸ್, ‘ನನಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಕುಟುಂಬದ ಜತೆ ಸಮಯ ಕಳೆಯಲು ಬಯಸಿದ್ದಾರೆ. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕೊಹ್ಲಿಯ ನಿರ್ಧಾರವನ್ನು ಗೌರವಿಸಲೇ ಬೇಕು” ಎಂದು ಡಿ ವಿಲಿಯರ್ಸ್ ಹೇಳಿದ್ದರು.
“ಕುಟುಂಬಕ್ಕೆ ಸಮಯ ನೀಡುವುದು ಕೊಹ್ಲಿಗೆ ಬಿಟ್ಟ ವಿಚಾರ. ಈ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ತಂಡಕ್ಕಿಂತ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಅವರ ಬದ್ಧತೆ, ಕ್ರಿಕೆಟ್ ಕುರಿತು ಪ್ರಶ್ನಿಸುವುದು ಸರಿಯಲ್ಲ. ಕೊಹ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ವಿಲಿಯರ್ಸ್ ಹೇಳಿದ್ದರು.