ಗಯಾನಾ: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024) ಟೂರ್ನಿಯಲ್ಲಿ ಅಜೇಯ ಗೆಲುವಿನೋಟ ಮುಂದುವರಿಸಿರುವ ಟೀಮ್ ಇಂಡಿಯಾ ನಾಳೆ(ಗುರುವಾರ) ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಸೆಮಿಫೈನಲ್(India vs England semi-final) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್(IND vs ENG) ತಂಡದ ಸವಾಲು ಎದುರಿಸಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಎದುರಾಗಿದೆ.
ಹವಾಮಾನ ವರದಿಗಳ ಪ್ರಕಾರ ಭಾರಿ ಮಳೆಯಿಂದಾಗಿ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅಭಿಮಾನಿಗಳಲ್ಲಿ ಈ ಪ್ರಶ್ನೆ ಕಾಡಲೂ ಕೂಡ ಒಂದು ಕಾರಣವಿದೆ. ದಕ್ಷಿಣ ಆಫ್ರಿಕಾ-ಅಫಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವಿದ್ದರೂ, ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೀಗಾಗಿ ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್ಗೇರಲಿದೆ. ಏಕೆಂದರೆ ಸೂಪರ್-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್ ಸೂಪರ್-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.
ಶೇ. 88 ರಷ್ಟು ಮಳೆ
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ. ಫೈನಲ್ ಪಂದ್ಯ ಶನಿವಾರವೇ ನಡೆಯಲಿರುವುದರಿಂದ, 2ನೇ ಸೆಮೀಸ್ಗೆ ಮೀಸಲು ದಿನವಿಲ್ಲ ಎಂದು ಐಸಿಸಿ ಈ ಮೊದಲೇ ಸ್ಪಷ್ಟಪಡಿಸಿತ್ತು. ಈ ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್ಗಳ ಪಂದ್ಯ ಆಡಬೇಕಾಗಿದೆ. ಲೀಗ್, ಸೂಪರ್-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್ಗಳ ಪಂದ್ಯ ಸಾಕಾಗಿತ್ತು.
ಇದನ್ನೂ ಓದಿ IND vs AUS : ಟಿ20 ವಿಶ್ವ ಕಪ್ 2024ರಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ ಭಾರತ ತಂಡ; 5 ವಿಕೆಟ್ಗೆ 205
ಫೈನಲ್ಗಿದೆ ಮೀಸಲು ದಿನ
ಮೊದಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನ ಇದೆ. ಜೂನ್ 29ಕ್ಕೆ ಬ್ರಿಜ್ಟೌನ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳಲಿದ್ದರೆ. ಪಂದ್ಯ ಎಲ್ಲಿಗೆ ನಿಂತಿರುತ್ತದೆಯೇ ಅಲ್ಲಿಂದಲೇ ಮೀಸಲು ದಿನ ಅಂದರೆ ಜೂನ್ 30 (ಭಾನುವಾರ) ನಡೆಯಲಿದೆ. ಫೈನಲ್ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 10 ಓವರ್ ಆಡಬೇಕು. ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ, ಫೈನಲ್ಗೇರಿದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಐಸಿಸಿ ಘೋಷಿಸಲಿದೆ.