Site icon Vistara News

IND vs ENG: ಒಂದು ದಿನ ಮುಂಚಿತವಾಗಿ ಆಡುವ ಬಳಗ ಪ್ರಕಟಿಸಿದ ಇಂಗ್ಲೆಂಡ್​; ತಂಡದಲ್ಲಿ ಏಕೈಕ ವೇಗಿ!

england playing 11

ಹೈದರಾಬಾದ್​: ಭಾರತ ವಿರುದ್ಧ(India vs England, 1st Test) ನಾಳೆಯಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಪ್ರವಾಸಿ ಇಂಗ್ಲೆಂಡ್(IND vs ENG)​ ತನ್ನ ಆಡುವ ಬಳಗವನ್ನು(england playing 11) ಪ್ರಕಟಿಸಿದೆ. ಅಚ್ಚರಿ ಎಂದರೆ ಈ ತಂಡದಲ್ಲಿ ಏಕೈಕ ವೇಗಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಸ್ಪಿನ್​ ಸ್ನೇಹಿಯಾಗಿರುವ ಹೈದರಾಬಾದ್​ನಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುವ ಸಲುವಾಗಿ ಇಂಗ್ಲೆಂಡ್​ ಈ ತಂತ್ರ ರೂಪಿಸಿದೆ. ಇದೇ ಕಾರಣಕ್ಕೆ ಅನುಭವಿ ಹಾಗೂ ಸ್ಟಾರ್ ವೇಗಿ ಜೇಮ್ಸ್ ಆಂಡರ್ಸನ್ ಅವರಿಗೂ ಅವಕಾಶ ನೀಡಲಿಲ್ಲ. ಟಾಮ್ ಹಾರ್ಟ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಇಂಗ್ಲೆಂಡ್ ತಂಡದ ಆಡುವ ಬಳಗದಲ್ಲಿ ಜ್ಯಾಕ್ ಲೀಚ್, ಟಾಮ್ ಹಾರ್ಟ್ಲಿ ಮತ್ತು ರೆಹಾನ್ ಅಹ್ಮದ್ ಪ್ರಮುಖ ಸ್ಪಿನ್​ ಬೌಲರ್​ಗಳಾಗಿದ್ದಾರೆ. ಮಾರ್ಕ್ ವುಡ್ ಏಕೈಕ ವೇಗಿಯಾಗಿದ್ದಾರೆ.

ವೀಸಾ ಸಮಸ್ಯೆಯಿಂದಾಗಿ ಶೋಯೆಬ್ ಬಶೀರ್ ಅವರ ಸೇವೆಯನ್ನು ಇಂಗ್ಲೆಂಡ್ ತಂಡ ಮೊದಲ ಪಂದ್ಯದಿಂದ ಕಳೆದುಕೊಂಡಿದೆ. ದ್ವಿತೀಯ ಪಂದ್ಯದ ವೇಳೆ ಅವರು ಭಾರತಕ್ಕೆ ಆಗಮಿಸಿ ತಂಡ ಸೇರುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್​ ಹೇಳಿದ್ದಾರೆ.

ಇಂಗ್ಲೆಂಡ್​ ಆಡುವ ಬಳಗ


ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.

ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್​ ತಂಡ ಟೆಸ್ಟ್​ನಲ್ಲಿ ಸುಧಾರಿತ ಪ್ರದರ್ಶನವನ್ನು ತೋರುತ್ತಿದ್ದರೂ 2012 ರಿಂದ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದಿಲ್ಲ. ಈ ಬಾರಿಯಾದರೂ ಗೆದ್ದಿತೇ? ಎನ್ನುವುದು ಈ ಸರಣಿಯ ಕುತೂಹಲ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್​ ಒಂದು ಟೆಸ್ಟ್​ ಆಡಿ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಭಾರತ ತಂಡ ಇಲ್ಲಿ ಅಜೇಯ ದಾಖಲೆ ಹೊಂದಿದೆ. ಹೀಗಾಗಿ ಇತ್ತಂಡಗಳ ಮೊದಲ ಟೆಸ್ಟ್​ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​ನ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ, ಹವಾಮಾನ ವರದಿ ಹೇಗಿದೆ?

ಆತಿಥೇಯ ಭಾರತ ಇನ್ನಷ್ಟೇ ತನ್ನ ಆಡುವ ಬಳಗವನ್ನು ಹೆಸರಿಸಬೇಕಿದೆ. ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಅವರ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದು ಸದ್ಯ ಕುತೂಹಲವಾಗಿದೆ. ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಯಲ್ಲಿ ಕೀಪಿಂಗ್​ ನಡೆಸಿದ್ದಕೆ.ಎಲ್‌. ರಾಹುಲ್‌ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ಕೀಪಿಂಗ್‌ ನಡೆಸುವುದಿಲ್ಲ ಎಂದು ಈಗಾಗಲೇ ಕೋಚ್​ ದ್ರಾವಿಡ್‌ ಖಚಿತಪಡಿಸಿದ್ದಾರೆ. ಹೀಗಾಗಿ ಕೆ.ಎಸ್‌. ಭರತ್‌ ಮತ್ತು ಧ್ರುವ ಜುರೆಲ್‌ ನಡುವೆ ಕೀಪಿಂಗ್‌ ರೇಸ್‌ ನಡೆಯಲಿದೆ. ಅನುಭವದ ಲೆಕ್ಕಾಚಾರದಲ್ಲಿ ಭರತ್​ಗೆ ಅವಕಾಶ ಸಿಗಬಹುದು.

Exit mobile version