ಹೈದರಾಬಾದ್: ಆತಿಥೇಯ ಭಾರತ ವಿರುದ್ಧದ ಮೊಲದ ಟೆಸ್ಟ್ ಪಂದ್ಯದಲ್ಲಿ 28ರನ್ಗಳ ಗೆಲುವು ಸಾಧಿಸಿದ ಪ್ರವಾಸಿ ಇಂಗ್ಲೆಂಡ್ ತಂಡ ದಾಖಲೆಯೊಂದನ್ನು ಬರೆದಿದೆ. ಹೈದರಾಬಾದ್ನಲ್ಲಿ ಭಾರತವನ್ನು ಸೋಲಿಸಿದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಭಾರತದ ಅಜೇಯ ಗೆಲುವಿನ ದಾಖಲೆ ಪತನಗೊಂಡಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಈ ಪಂದ್ಯಕ್ಕೂ ಮುನ್ನ 5 ಟೆಸ್ಟ್ ಪಂದ್ಯಗಳು ಆಡಿ, ಈ ಪೈಕಿ ನಾಲ್ಕರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಈ ಮೂಲಕ ಅಜೇಯ ದಾಖಲೆ ಹೊಂದಿತ್ತು. ಆದರೆ, 6ನೇ ಟೆಸ್ಟ್ನಲ್ಲಿ ಸೋಲು ಕಾಣುವ ಮೂಲಕ ಈ ದಾಖಲೆಯನ್ನು ಕಳೆದುಕೊಂಡಿದೆ.
ಭಾರತ ಇಲ್ಲಿ ನಡೆದಿದ್ದ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇಂಗ್ಲೆಂಡ್ ತಂಡದ ವಿರುದ್ಧವೇ. 2010ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ತಂಡ ಆ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದು ಈ ಮೈದಾನದಲ್ಲಿ ಉಭಯ ತಂಡಗಳ ಮೊದಲ ಟೆಸ್ಟ್ ಮುಖಾಮುಖಿಯೂ ಆಗಿತ್ತು. 2ನೇ ಪ್ರಯತ್ನದಲ್ಲಿ ಇಂಗ್ಲೆಂಡ್ ಸೋಲುಣಿಸುವ ಮೂಲಕ ಇತಿಹಾಸವೊಂದನ್ನು ಬರೆಯಿತು.
ಹೈದರಾಬಾದ್‌ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದ್ದಲ್ಲಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ 102.1 ಓವರ್ ಬ್ಯಾಟಿಂಗ್ ನಡೆಸಿ 420 ರನ್ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 231 ರನ್ಗಳ ಗೆಲುವಿನ ಗುರಿ ನೀಡಿತು.
ಇದನ್ನೂ ಓದಿ IND vs ENG: ಟೀಮ್ ಇಂಡಿಯಾದ ಹಾರ್ಟ್ ಬ್ರೇಕ್ ಮಾಡಿದ ಟಾಮ್ ಹಾರ್ಟ್ಲಿ
ಸಾಧಾರಣ ಮೊತ್ತದ ಗುರಿ ಕಂಡು ಇದನ್ನು ಭಾರತ ಇಂದೇ ಹೊಡೆದು ಗೆಲುವು ಸಾಧಿಸಬಹುದೆಂದು ನಿರೀಕ್ಷೆ ಮಾಡಲಾಯಿತು. ಆದರೆ, ಆಂಗ್ಲರು ಸ್ಪಿನ್ ಅಸ್ತ್ರದ ಮೂಲಕ ಭಾರತದ ಬ್ಯಾಟರ್ಗಳನ್ನು ಕಟ್ಟಿ ಹಾಕಿ ಎಲ್ಲ ನಿರೀಕ್ಷೆಗಳನ್ನು ಹುಸಿಯಾಗುವಂತೆ ಮಾಡಿದರು. ಪಂದ್ಯವನ್ನು 28 ರನ್ಗಳಿಂದ ಗೆದ್ದು ಬೀಗಿದರು. ಭಾರತ 202 ರನ್ಗೆ ಸರ್ವಪತನ ಕಂಡಿತು.
It came right down to the wire in Hyderabad but it's England who win the closely-fought contest.#TeamIndia will aim to bounce back in the next game.
— BCCI (@BCCI) January 28, 2024
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/OcmEgKCjUT
ಉತ್ಕೃಷ್ಟ ಮಟ್ಟದ ಸ್ಪಿನ್ ದಾಳಿ ನಡೆಸಿದ ಟಾಮ್ ಹಾರ್ಟ್ಲಿ 26.2 ಓವರ್ ಎಸೆದು ಕೇವಲ 62 ರನ್ ಬಿಟ್ಟುಕೊಟ್ಟು ಭಾರತದ ಕುಸಿತಕ್ಕೆ ಕಾರಣರಾದರು. ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು. ಇವರ ಸ್ನಿನ್ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಭಾರತೀಯ ಬ್ಯಾಟರ್ಗಳು ತರಗೆಲೆಯಂತೆ ಉದುರಿ ಹೋದರು.
ಶ್ರೀಕರ್ ಭರತ್ ಮತ್ತು ಆರ್. ಅಶ್ವಿನ್ ಸೇರಿಕೊಂಡು 8ನೇ ವಿಕೆಟ್ಗೆ ಉತ್ತಮ ಜತೆಯಾಟ ನಿಭಾಯಿಸಿ ಭಾರತಕ್ಕೆ ಗೆಲುವಿನ ಸಣ್ಣ ಆಸೆಯೊಂದನ್ನು ಚಿಗುರೊಡೆಯುವಂತೆ ಮಾಡಿದರು. ಆದರೆ, 4ನೇ ದಿನದಾಟ ಮುಗಿಯಲು ಮೂರು ಓವರ್ ಇರುವಾಗ ಉಭಯ ಆಟಗಾರರ ವಿಕೆಟ್ ಕೂಡ ಪತನಗೊಂಡಿತು. ಉಭಯ ಆಟಗಾರರು ಕೂಡ ತಲಾ 28 ರನ್ ಗಳಿಸಿ ಟಾಮ್ ಹಾರ್ಟ್ಲಿಗೆ ವಿಕೆಟ್ ಒಪ್ಪಿಸಿದರು. ಇಲ್ಲಿಗೆ ಭಾರತದ ಸೋಲು ಕೂಡ ಖಚಿತವಾಯಿತು. ಅಂತಿಮವಾಗಿ ಸಿರಾಜ್ ವಿಕೆಟ್ ಪತನದ ಮೂಲಕ ಇನ್ನೊಂದು ದಿನ ಬಾಕಿ ಇರುವಂತೆಯೇ ಪಂದ್ಯ ಮುಕ್ತಾಯ ಕಂಡಿತು.