Site icon Vistara News

IND vs ENG: ಭಾರತದಲ್ಲಿ ಇಂಗ್ಲೆಂಡ್​ ತಂಡದ ಟೆಸ್ಟ್​ ಇತಿಹಾಸವೇ ಬಲು ರೋಚಕ!

1933_34 england vs india test

ಹೈದರಾಬಾದ್​: ಭಾರತ ಮತ್ತು ಇಂಗ್ಲೆಂಡ್(IND vs ENG)​ ನಡುವಣ ಮೊದಲ ಪಂದ್ಯ(India vs England, 1st Test) ನಾಳೆ ಹೈದರಾಬಾದ್​ನ ರಾಜಿವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ(Rajiv Gandhi International Stadium) ನಡೆಯಲಿದೆ. ಸರಣಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಈ ಸರಣಿಯನ್ನು ಭಾರತವೇ ಗೆಲ್ಲಲಿದೆ ಎನ್ನಲಾರಂಭಿಸಿದ್ದಾರೆ. ಆದರೆ, ಇಂಗ್ಲೆಂಡ್​ ಕೂಡ ಭಾರತದ ನೆಲದಲ್ಲಿ ಸರಣಿ ಗೆದ್ದ ದಾಖಲೆ ಹೊಂದಿದೆ. ಭಾರತದಲ್ಲಿ ಇಂಗ್ಲೆಂಡ್​ ತಂಡದ ಟೆಸ್ಟ್​ ಸಾಧನೆ ಮತ್ತು ಇತಿಹಾಸದ ಇಣುಕು ನೋಟವೊಂದು ಇಲ್ಲಿದೆ.

11 ವರ್ಷಗಳಿಂದ ಭಾರತ ಅಜೇಯ


ಭಾರತ ತಂಡ ಕಳೆದ 11 ವರ್ಷಗಳಿಂದಲೂ ತವರಿನಲ್ಲಿ ಆಡಿದ ಟೆಸ್ಟ್​ ಸಣಿಯಲ್ಲಿ ಅಜೇಯ ದಾಖಲೆ ಹೊಂದಿದೆ. ಆಡಿದ ಎಲ್ಲ ಸರಣಿಯನ್ನೂ ಗೆದ್ದು ಬೀಗಿದೆ. ಯಾವುದೇ ಸರಣಿನ್ನು ಕೂಡ ಡ್ರಾ ಮಾಡಿಕೊಂಡಿಲ್ಲ. 11 ವರ್ಷದಲ್ಲಿ ಆಡಿರುವ 16 ಟೆಸ್ಟ್‌ ಸರಣಿಗಳಲ್ಲೂ ಭಾರತವೇ ಮೇಲುಗೈ ಸಾಧಿಸಿದೆ. 1994-2000 ಹಾಗೂ 2004-2008ರ 2 ಅವಧಿಗಳಲ್ಲಿ ಆಸ್ಟ್ರೇಲಿಯಾ ತವರಿನಲ್ಲಿ ತಲಾ 10 ಸರಣಿಗಳಲ್ಲಿ ಗೆದ್ದಿತ್ತು. ಆದರೆ ತವರಿನಲ್ಲಿ 10ಕ್ಕಿಂತ ಹೆಚ್ಚು ಸರಣಿಗಳಲ್ಲಿ ಅಜೇಯವಾಗಿ ಉಳಿದ ಚರಿತ್ರೆ ಸದ್ಯ ಭಾರತದ ಹೆಸರಿನಲ್ಲಿದೆ.

2012ರಲ್ಲಿ ಸೋಲು


ಟೀಮ್​ ಇಂಡಿಯಾ ತವರಿನಲ್ಲಿ ಕೊನೆಯ ಬಾರಿ ಸರಣಿ ಸೋತಿದ್ದು 2012ರಲ್ಲಿ. ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಈ ಸೋಲು ಎದುರಾಗಿತ್ತು. ಅದೂ ಕೂಡಾ ಇಂಗ್ಲೆಂಡ್‌ ವಿರುದ್ಧವೇ. 4 ಪಂದ್ಯಗಳ ಸರಣಿಯನ್ನು ಆಂಗ್ಲರು 2-1 ಅಂತರದಲ್ಲಿ ಗೆದ್ದು ಭಾರತಕ್ಕೆ ತವರಿನಲ್ಲಿ ಸೋಲಿನ ಆಘಾತವಿಕ್ಕಿದ್ದರು. ಆದರೆ, ಆ ಬಳಿಕ 2 ಬಾರಿ ಇಂಗ್ಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಆಡಿದ್ದು, 2ರಲ್ಲೂ ಸೋತಿದೆ. ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್​ ತಂಡ ಟೆಸ್ಟ್​ನಲ್ಲಿ ಸುಧಾರಿತ ಪ್ರದರ್ಶನವನ್ನು ತೋರುತ್ತಿದ್ದರೂ 2012 ರಿಂದ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದಿಲ್ಲ. ಇದೀಗ 12 ವರ್ಷಗಳ ಬಳಿಕ ಮತ್ತೆ ಇಂಗ್ಲೆಂಡ್​ ತಂಡ ಭಾರತದಲ್ಲಿ ಸರಣಿ ಜಯ ಕಂಡಿತೇ ಎನ್ನುವುದು ಈ ಬಾರಿಯ ಕುತೂಹಲ.

5 ಸರಣಿ ಗೆದ್ದ ಸಾಧನೆ ಇಂಗ್ಲೆಂಡ್​ ತಂಡದ್ದು!


ಭಾರತ ಮತ್ತು ಇಂಗ್ಲೆಂಡ್​ ತಂಡಗಳ ನಡುವೆ 1933ರಿಂದ ಭಾರತದಲ್ಲಿ 16 ಟೆಸ್ಟ್‌ ಸರಣಿಗಳು ಆಯೋಜನೆಗೊಂಡಿವೆ. ಇದರಲ್ಲಿ ಭಾರತ 8 ಸರಣಿಗಳಲ್ಲಿ ಗೆದ್ದಿದೆ. ಇಂಗ್ಲೆಂಡ್‌ 5ರಲ್ಲಿ ಗೆಲುವು ಸಾಧಿಸಿದೆ. ಉಳಿದ 3 ಸರಣಿಗಳು ಡ್ರಾಗೊಂಡಿವೆ. ಒಟ್ಟಾರೆ ಇತ್ತಂಡಗಳ ನಡುವಿನ ಟೆಸ್ಟ್‌ ಸರಣಿಗೆ 9 ದಶಕಗಳ ಇತಿಹಾಸವಿದೆ. ಇಂಗ್ಲೆಂಡ್​ ತಂಡ ಭಾರತದಲ್ಲಿ ಮೊದಲ ಬಾರಿ ಟೆಸ್ಟ್​ ಸರಣಿ ಆಡಿದ್ದು 1933ರಲ್ಲಿ. ಮೂರು ಪಂದ್ಯಗಳ ಈ ಸರಣಿಯನ್ನು ಇಂಗ್ಲೆಂಡ್​ 2-0 ಅಂತರದಿಂದ ಗೆದ್ದು ಚೊಚ್ಚಲ ಪ್ರಯತ್ನದಲ್ಲೇ ಸರಣಿ ಗೆದ್ದ ಸಾಧನೆ ಮಾಡಿತ್ತು.

ಇದನ್ನೂ ಓದಿ IND vs ENG: ಒಂದು ದಿನ ಮುಂಚಿತವಾಗಿ ಆಡುವ ಬಳಗ ಪ್ರಕಟಿಸಿದ ಇಂಗ್ಲೆಂಡ್​; ತಂಡದಲ್ಲಿ ಏಕೈಕ ವೇಗಿ!

ಭಾರತ ಕಳೆದ 11 ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧ 3, ಶ್ರೀಲಂಕಾ, ನ್ಯೂಜಿಲ್ಯಾಂಡ್​, ಇಂಗ್ಲೆಂಡ್‌, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ವಿರುದ್ಧ ತಲಾ 2 ಸರಣಿ, ಅಫಘಾನಿಸ್ತಾನ ವಿರುದ್ಧ 1 ಸರಣಿ ಗೆದ್ದು ಅಜೇಯ ದಾಖಲೆ ಹೊಂದಿದೆ. ಈ ಬಾರಿಯೂ ಗೆದ್ದು ತನ್ನ ದಾಖಲೆಯನ್ನು ಮುಂದುವರಿಸುವ ಆತ್ಮವಿಶ್ವಾಸ ರೋಹಿತ್​ ಪಡೆಯದ್ದಾಗಿದೆ. ಆದರೂ ಭಾರತದಲ್ಲಿ ಉತ್ತಮ ದಾಖಲೆ ಹೊಂದಿರುವ ಮತ್ತು ನೂತನ ಶೈಲಿಯಲ್ಲಿ ಟೆಸ್ಟ್​ ಆಡುವ ಆಂಗ್ಲರ ಸವಾಲನ್ನು ಕಡೆಗಣಿಸಬಾರದು. ತವರಿನ ಪಂದ್ಯ ಎನ್ನುವುದನ್ನು ಮರೆತು ಆಡಬೇಕಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದುವರೆಗೆ ಭಾರತ 5 ಟೆಸ್ಟ್​ ಪಂದ್ಯಗಳು ಗಳನ್ನು ಆಡಿದೆ. ಆ ಪೈಕಿ ಭಾರತ ನಾಲ್ಕರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಡ್ರಾ ಸಾಧಿಸಿದ್ದು ಇಂಗ್ಲೆಂಡ್​ ವಿರುದ್ದವೇ. 

Exit mobile version