Site icon Vistara News

IND vs ENG: ಆಂಗ್ಲರ ಬೌಲಿಂಗ್​ ದಾಳಿಗೆ ಕುಸಿದ ಭಾರತ; ಇಂಗ್ಲೆಂಡ್​ ಗೆಲುವಿಗೆ 230 ರನ್​ ಗುರಿ

Mark Wood celebrates after getting Mohammed Shami to nick

ಲಕ್ನೋ: ಆಡಿದ 5 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಅಜೇಯವಾಗಿ ಮುನ್ನುಗ್ಗುತ್ತಿದ್ದ ಭಾರತ ತಂಡ ಇಂಗ್ಲೆಂಡ್​(IND vs ENG) ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಭರ್ತಿ 50 ಓವರ್​ ಆಡಿ 9 ವಿಕೆಟ್​ನಷ್ಟಕ್ಕೆ 229 ರನ್ ಗಳಿಸಿದೆ. ಇಂಗ್ಲೆಂಡ್​ ಗೆಲುವಿಗೆ 230 ರನ್​ ಬಾರಿಸಬೇಕಿದೆ.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಶುಭಮನ್​ ಗಿಲ್​ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್​ ಕೊಹ್ಲಿ ಅವರು 9 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್​ ಕೈ ಚೆಲ್ಲಿದರು. ಇದು ವಿರಾಟ್​ ಕೊಹ್ಲಿ ಅವರ ವಿಶ್ವಕಪ್​ ಮೊದಲ ಡಕ್​ ಔಟ್​ ಆಗಿದೆ. ಕೊಹ್ಲಿ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಕೂಡ 4 ರನ್​ಗೆ ಆಟ ಮುಗಿಸಿದರು. 40 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ಭಾರತ ಆರಂಭಿಕ ಆಘಾತ ಎದುರಿಸಿತು.

ರೋಹಿತ್​ ಆಸರೆ

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕ ರೋಹಿತ್​ ಶರ್ಮ ಅವರು ಎದೆಗುಂದದೆ ಇಂಗ್ಲೆಂಡ್​ ಬೌಲಿಂಗ್​ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿದರು. ಆರಂಭದಿಂದಲೇ ಆಂಗ್ಲರಿಗೆ ಸಿಕ್ಸರ್​, ಬೌಂಡರಿಗಳ ರುಚಿ ತೋರಿಸುತ್ತಾ ತಮ್ಮ ಎಂದಿನ ಶೈಲಿಯಲ್ಲೇ ಆಡ ತೊಡಗಿದರು. ಇವರಿಗೆ ಕೆಲ ಕಾಲ ರಾಹುಲ್​ ಉತ್ತಮ ಬೆಂಬಲ ನೀಡಿದರು.

ಜೀವದಾನ ಪಡೆದ ರೋಹಿತ್​

ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ರೋಹಿತ್​ ಅವರು 33 ರನ್​ ಗಳಿಸಿದ ವೇಳೆ ಎಲ್​ಬಿಡಬ್ಲ್ಯುನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅವರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್​ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐದನೇ ನಿದರ್ಶನ. 2013, 2017, 2018 ಮತ್ತು 2019 ರಲ್ಲಿ ಈ ಸಾಧನೆ ಮಾಡಿದ್ದರು.

18 ಸಾವಿರ ರನ್​

ರೋಹಿತ್​ ಅವರು 48 ರನ್​ ಗಳಿಸಿದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 18 ಸಾವಿರ ರನ್​ ಪೂರ್ತಿಗೊಳಿಸಿದರು. ಈ ಸಾಧನೆ ಮಾಡಿದ 5ನೇ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಮೈಲಿಗಲ್ಲು ತಲುಪಲು ರೋಹಿತ್​ 477 ಇನ್ನಿಂಗ್ಸ್‌ ಆಡಿದ್ದಾರೆ. ರೋಹಿತ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ನಾಯಕನಾಗಿ ನೂರನೇ ಪಂದ್ಯ

ರೋಹಿತ್​ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಮೈಲಿಗಲ್ಲೊಂದನ್ನು ನಿರ್ಮಿಸಿದರು. ನಾಯಕನಾಗಿ 100ನೇ ಪಂದ್ಯವನ್ನು ಮುನ್ನಡೆಸಿದ ದಾಖಲೆ ಬರೆದರು. ಈ ಮೂಲಕ 100ನೇ ಪಂದ್ಯವನ್ನು ಮುನ್ನಡೆಸಿದ 7ನೇ ಭಾರತೀಯ ನಾಯಕ ಎನಿಸಿಕೊಂಡರು.  ಅತಿ ಹೆಚ್ಚು ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ದಾಖಲೆ ವಿಶ್ವಕಪ್​ ವಿಜೇತ ಮಹೇಂದ್ರ ಸಿಂಗ್​ ಧೋನಿ ಅವರ ಹೆಸರಿನಲ್ಲಿದೆ. ಧೋನಿ ಅವರು 332 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆ ಬಳಿಕದ ಸ್ಥಾನ ಮೊಹಮ್ಮದ್ ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108) ಮತ್ತು ರಾಹುಲ್ ದ್ರಾವಿಡ್ (104) ಹೆಸರಿನಲ್ಲಿದೆ. ಒಟ್ಟಾರೆಯಾಗಿ, ಪುರುಷರ ಕ್ರಿಕೆಟ್‌ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ 2 ದಾಖಲೆ ಬರೆದ ರೋಹಿತ್​ ಶರ್ಮ

13 ರನ್​ ಅಂತರದಲ್ಲಿ ಕೈ ತಪ್ಪಿದ ಶತಕ

ಶತಕ ಬಾರಿಸುವತ್ತ ಮುನ್ನಗುತ್ತಿದ್ದ ರೋಹಿತ್​ ಅವರ ಆಟಕ್ಕೆ ಕೊನೆಗೂ ಆದೀಲ್​ ರಶೀದ್​ ಬ್ರೇಕ್​ ಹಾಕುವಲ್ಲಿ ಯಶಸ್ಸು ಕಂಡರು. ಸಿಕ್ಸರ್​ಗೆ ಬಾರಿಸಿದ ಚೆಂಡು ಲಿವಿಂಗ್​ಸ್ಟೋನ್​ ಕೈ ಸೇರಿತು. 87 ರನ್​ಗೆ ಆಟ ಮುಗಿಸಿದರು. ಕೇವಲ 13 ರನ್​ ಅಂತರದಲ್ಲಿ ಶತಕ ವಂಚಿತರಾದರು. ಅವರ ಅರ್ಧಶತಕದ ಇನಿಂಗ್ಸ್​ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಇವರಿಗೆ ಸಾಥ್​ ನೀಡಿದ ರಾಹುಲ್ 58 ಎಸೆತ ಎದುರಿಸಿ ಮೂರು ಬೌಂಡರಿ ನೆರವಿನಿಂದ 39 ರನ್​ ಗಳಿಸಿದರು.

ಅಬ್ಬರಿಸಿದ ಸೂರ್ಯಕುಮಾರ್​

ರೋಹಿತ್​ ಮತ್ತು ರಾಹುಲ್​ ವಿಕೆಟ್​ ಪತನದ ಬಳಿಕ ಭಾರತ ಮತ್ತೆ ಕುಸಿತ ಕಂಡಿತು. ರವೀಂದ್ರ ಜಡೇಜಾ(8) ಮತ್ತು ಮೊಹಮ್ಮದ್​ ಶಮಿ(1) ರನ್​ಗೆ ವಿಕೆಟ್​ ಒಪ್ಪಿಸಿದರು. ಈ ವೇಳೆ ಸಿಡಿದು ನಿಂತ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​ ಅವರು ತಮ್ಮ ನಟರಾಜ ಭಂಗಿಯ ಶೈಲಿಯಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಶಕ್ತಿ ಮೀರಿ ಹಿಗ್ಗಿಸ ತೊಡಗಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗಲೇ ಇಲ್ಲ. ಆದರೂ ಕೆಚ್ಚೆದೆಯಿಂದ ಬ್ಯಾಟಿಂಗ್​ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 49 ರನ್​ ಗಳಿಸಿದರು. ಅವರ ಈ ಅಂತಿಮ ಹಂತದ ಪ್ರದರ್ಶನದಿಂದ ತಂಡ 200ರ ಗಡಿ ದಾಟುವಂತೆ ಮಾಡಿತು. ಅವರು ಕೂಡ ಬೇಗನೆ ವಿಕೆಟ್​ ಕೈಚೆಲ್ಲುತ್ತಿದ್ದರೆ ತಂಡದ ಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು.

ಇದನ್ನೂ ಓದಿ Virat Kohli: ಶೂನ್ಯಕ್ಕೆ ಔಟಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಆ್ಯಂಗ್ರಿ ಮ್ಯಾನ್​ ಆದ ಕೊಹ್ಲಿ

ಅಂತಿಮ ಹಂತದಲ್ಲಿ ಜಸ್​ಪ್ರೀತ್​ ಬುಮ್ರಾ 16 ರನ್​ ಬಾರಿಸಿ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್​ ಪರ ಡೇವಿಡ್​ ವಿಲ್ಲಿ 45 ರನ್​ ವೆಚ್ಚದಲ್ಲಿ 3 ವಿಕೆಟ್​ ಕಿತ್ತರು. ಉಳಿದಂತೆ ಆದೀಲ್​ ರಶೀದ್​ 35ಕ್ಕೆ 2, ಕ್ರಿಕ್ಸ್​ ವೋಕ್ಸ್​ ಕೂಡ 2 ವಿಕೆಟ್​ ಪಡೆದರು. ಮಾರ್ಕ್​ ವುಡ್​ ಒಂದು ವಿಕೆಟ್​ ಕೀಳಲಷ್ಟೇ ಶಕ್ತರಾದರು.

Exit mobile version